ಬೆಂಗಳೂರು, ಡಿ 28 (DaijiworldNews/AA): ಕನ್ನಡದ ಪರ ಹೋರಾಟ ಮಾಡುವುದರಲ್ಲಿ ಯಾವುದೇ ಅಭ್ಯಂತರವಿಲ್ಲ. ಆದರೆ ಯಾವುದೇ ಕಾರಣಕ್ಕೂ ಸಾರ್ವಜನಿಕರ ಆಸ್ತಿ-ಪಾಸ್ತಿಗೆ ಹಾನಿ ಉಂಟು ಮಾಡುವವರನ್ನು ಸರ್ಕಾರ ಎಂದಿಗೂ ಸಹಿಸುವುದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರ ಬಂಧನಕ್ಕೆ ಪ್ರತಿಕ್ರಿಯಿಸಿದ ಅವರು, ಕಾನೂನು ಪಾಲಿಸುವುದು, ಗೌರವಿಸುವುದು ಎಲ್ಲರ ಕರ್ತವ್ಯ. ಸಾರ್ವಜನಿಕರ ಆಸ್ತಿ-ಪಾಸ್ತಿಗಳಿಗೆ ಹಾನಿಯುಂಟು ಮಾಡುವುದು ಸರಿಯಲ್ಲ. ಯಾರ ಆಸ್ತಿಯನ್ನು ನಾಶಗೊಳಿಸಬಾರದು. ನಾನು ಕನ್ನಡಿಗನೇ ಪ್ರತಿಭಟನೆ ಮಾಡಿ ಎಂದೇ ನಾನು ಹೇಳುತ್ತೇನೆ. ಪ್ರಜಾಪ್ರಭುತ್ವದಲ್ಲಿ ಅವರು ಏನನ್ನಾದರೂ ಮಾಡಲಿ. ಬೇರೆ ಕಡೆಯಿಂದ ಇಲ್ಲಿ ಬಂದು ಬದುಕುತ್ತಿರುವವರಿಗೆ ತಿಳಿ ಹೇಳಬೇಕು. ಬದಲಾಗಿ ಅವರನ್ನು ಬೆದರಿಸುವುದಲ್ಲ ಎಂದು ಹೇಳಿದರು.
ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಬೇಕಿದ್ದರೆ ನನ್ನ ಮನೆಯ ಮುಂದೆ ಬಂದು ಹೋರಾಟ ಮಾಡಲಿ. ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಮುಖ್ಯಮಂತ್ರಿಗಳು ಕೂಡ ಸಚಿವರಿಗೆ ಕನ್ನಡದಲ್ಲೇ ಟಿಪ್ಪಣಿ ಬರೆಯಲು ತಿಳಿಸಿದ್ದಾರೆ. ನಾವು ಕೂಡ ಕನ್ನಡಿಗರೇ. ಅವರ ಬೇಡಿಕೆಗಳನ್ನು ಅನುಷ್ಠಾನಕ್ಕೆ ತರಲು ಕಾಲಾವಕಾಶಬೇಕು ಎಂದು ಡಿಕೆಶಿ ತಿಳಿಸಿದರು.