ಹರಿಯಾಣ, ಡಿ 28 (DaijiworldNews/SK): ಕೆಲವೊಮ್ಮೆ ಗುರಿ ಸಾಧನೆಗಾಗಿ ಹಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಕೊನೆಗೆ ಯಶಸ್ಸು ದೊರೆತಾಗ ಈ ತ್ಯಾಗಗಳಿಗೆ ಪ್ರತಿಫಲ ಸಿಕ್ಕಂತಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಡಾ.ರಾಜೇಶ್ ಮೋಹನ್. ಇವರು ಸರ್ಕಾರಿ ವೈದ್ಯ ವೃತ್ತಿಯನ್ನು ಬಿಟ್ಟು ಐಪಿಎಸ್ ಅಧಿಕಾರಿಯಾಗುವ ಮೂಲಕ ಕನಸನ್ನು ನನಸಾಗಿಸಿಕೊಂಡವರು.
ಮೂಲತಃ ಹರಿಯಾಣದವಾರದ ಡಾ. ರಾಜೇಶ್ ಮೋಹನ್ ಅವರು ಶ್ರೀಮಂತ ಕುಟುಂಬದಲ್ಲಿ ಜನಿಸಿದವರು. ವೈದ್ಯಕೀಯ ಪದವೀಧರರಾದ ಡಾ. ರಾಜೇಶ್ ಮೋಹನ್ ಅವರು 2012 ರಲ್ಲಿ ಚಂಡೀಗಢದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಉದ್ಯೋಗದ ಸಮಯದಲ್ಲಿಯೂ ಸಹ, ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಸಹಾಯವನ್ನು ಮಾಡುತ್ತಿದ್ದರು. ಈ ದಿನಗಳಲ್ಲೇ ಹಿಂದುಳಿದವರಿಗೆ ಸೇವೆ ಸಲ್ಲಿಸುವ ಆಳವಾದ ತುಡಿತದಿಂದ ಪ್ರೇರೇಪಣೆಗೊಂಡ ಅವರು ವೈದ್ಯನಿಂದ IPS ಅಧಿಕಾರಿಯಾಗಲು ನಿರ್ಧರಿಸಿದರು.
ನಂತರ ಡಾ ರಾಜೇಶ್ ಮೋಹನ್ ಅವರು ತಮ್ಮ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ, UPSC ತಯಾರಿಗೆ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದರು. ಆದರೆ ತಮ್ಮ ಸ್ಥಾನವನ್ನು ತೊರೆದ ನಂತರವೂ, ಅವರು COVID-19 ಸಾಂಕ್ರಾಮಿಕ ಸಮಯದಲ್ಲಿ ರೋಗಿಗಳಿಗೆ ಉಚಿತ ವೈದ್ಯಕೀಯ
ಸಹಾಯ ಮಾಡುವ ಮೂಲಕ ನೆರವಾದರು.
ಆದರೆ ಇದರ ನಡುವೆ UPSC ಪರೀಕ್ಷೆ ಬರೆಯಲು ಮುಂದಾದ ರಾಜೇಶ್ ಅವರಿಗೆ ಬಹಳ ಸುಲಭವಾಗಿ ಯಶಸ್ಸನ್ನು ಕಾಣಲು ಸಾಧ್ಯವಾಗಲಿಲ್ಲ. ಅವರು ನಾಲ್ಕು ಬಾರಿ UPSC ಪರೀಕ್ಷೆಯಲ್ಲಿ ವೈಫಲ್ಯವನ್ನು ಕಾಣಬೇಕಾದ ಪರಿಸ್ಥಿತಿ ಎದುರಾಯಿತು. ಈ ಹಿನ್ನಡೆಗಳಿಂದ ವಿಚಲಿತರಾಗದ ಅವರು ಹೆಚ್ಚುವರಿ ತರಬೇತಿ ಪಡೆಯಲು ಚಂಡೀಗಢದಿಂದ ದೆಹಲಿಗೆ ಸ್ಥಳಾಂತರಗೊಂಡರು.
ಅಂತಿಮವಾಗಿ, ಛಲ ಬಿಡದೇ, ಕಠಿಣ ಪರಿಶ್ರಮ ಪಟ್ಟು 2020 ರಾಲ್ಲಿ UPSC ಪರೀಕ್ಷೆ ಬರೆದು 102 ನೇ ರ್ಯಾಂಕ್ ಗಳಿಸುವ ಮೂಲಕ ಸ್ಪಾರ್ಧತ್ಮಕ ಪರೀಕ್ಷೆಯಲ್ಲಿ ಡಾ. ರಾಜೇಶ್ ಯಶಸ್ಸನ್ನು ಕಂಡರು.
ಈ ಮೂಲಕ ತಮ್ಮ ಜೀವನದಲ್ಲಿ ಎದುರಾದ ಸಮಸ್ಯೆಗಳಿಗೆ ಕುಗ್ಗದೇ ದಿಟ್ಟತನದಿಂದ ಹೇಗೆ ಅವುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ತೋರಿಸಿಕೊಟ್ಟು ಯುವಕರಿಗೆ ಮಾದರಿಯಾಗಿದ್ದಾರೆ.