ನವದೆಹಲಿ, ಡಿ 27 (DaijiwordNews/MR): ಹರಿಯಾಣದ ಝಜ್ಜರ್ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ಪ್ರಮುಖ ಕುಸ್ತಿ ಪಟುಗಳನ್ನು ಭೇಟಿ ಆಗಿದ್ದಾರೆ. ಒಲಿಂಪಿಕ್ನಲ್ಲಿ ಕಂಚು ವಿಜೇತ ಬಜರಂಗ್ ಪುನಿಯಾ ಸೇರಿ ಹಲವರನ್ನು ಭೇಟಿಯಾಗಿ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ.
ಕುಸ್ತಿ ಪಟುಗಳಾದ ದೀಪಕ್ ಪುನಿಯಾ, ಬಜರಂಗ್ ಪುನಿಯಾ ಸೇರಿ ಹಲವರನ್ನು ರಾಹುಲ್ ಗಾಂಧಿ ಭೇಟಿಯಾಗಿರುವ ಫೋಟೋ ವೈರಲ್ ಆಗಿದೆ. ಡಬ್ಲ್ಯೂಎಫ್ಐನಲ್ಲಿ ಇತ್ತೀಚೆಗೆ ಚುನಾವಣೆ ನಡೆದಿತ್ತು. ಈ ಎಲೆಕ್ಷನ್ನಲ್ಲಿ ಹಿಂದಿನ ಕಳಂಕಿತ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಆಯ್ಕೆ ಆಗಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧ ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ಕಿರುಕುಳ ಆರೋಪ ಇದೆ. ಅವರ ತಲೆದಂಡ ಬಳಿಕ ನಡೆದ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಆಯ್ಕೆ ಆಗಿರೋದು, ಕುಸ್ತಿಪಟುಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸದ್ಯ ಭಾರತ ಸರ್ಕಾರ ಡಬ್ಲ್ಯೂಎಫ್ಐಗೆ ಆಯ್ಕೆ ಆಗಿರುವ ನೂತನ ಸದಸ್ಯರನ್ನು ಅಮಾನತಿನಲ್ಲಿಟ್ಟಿದೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ದೇಶದ ಕುಸ್ತಿಪುಟುಗಳು ಭಾರತ ಸರ್ಕಾರ ನೀಡಿರುವ ಪ್ರಶಸ್ತಿಗಳನ್ನು ವಾಪಸ್ ಮಾಡುತ್ತಿದ್ದಾರೆ. ಭಜರಂಗ್ ಪುನಿಯಾ, ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ವಿಜೇತ ವಿನೇಶ್ ಪೋಗಾಟ್, ಒಲಿಂಪಿಕ್ನಲ್ಲಿ ಕಂಚು ಗೆದ್ದಿರುವ ಸಾಕ್ಷಿ ಮಲಿಕ್ ಸೇರಿ ಅನೇಕ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಆರೋಪ ಮಾಡಿದ್ದು, ಪ್ರತಿಭಟನೆಯ ನೇತೃತ್ವ ವಹಿಸಿದ್ದರು.