ವಿಜಯಪುರ, ಡಿ 26 (DaijiworldNews/AA): ಕೊರೊನಾ ಮೊದಲನೇ ಅಲೆಯ ವೇಳೆ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದರು. ಆ ಸಮಯದಲ್ಲಿ 40,000 ಕೋಟಿ ರೂ. ಅವ್ಯವಹಾರ ಮಾಡಿದ್ದಾರೆ. ಪ್ರತಿಯೊಬ್ಬ ಕೊರೊನಾ ರೋಗಿಗೆ 8 - 10 ಲಕ್ಷ ರೂ ಬಿಲ್ ಮಾಡಲಾಗಿತ್ತು. ಆಗ ನಮ್ಮ ಸರ್ಕಾರವಿದ್ದರೇನು? ಕಳ್ಳರು ಕಳ್ಳರೇ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ್ಯಾರು ಲೂಟಿ ಮಾಡಿ ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆಂದು ಹೊರ ತೆಗೆಯುತ್ತೇನೆ. ಕೊರೊನಾ ವೇಳೆ 45 ರೂ. ಮಾಸ್ಕ್ಗೆ 485 ರೂ. ಮಾಡಿದರು. ಬೆಂಗಳೂರು ನಗರದಲ್ಲಿ 10 ಸಾವಿರ ಬೆಡ್ ಸಿದ್ದಪಡಿಸಿ, ಅದಕ್ಕೆ 10 ಸಾವಿರ ಬಾಡಿಗೆ ಪಡೆದರು. ಆ ಬಾಡಿಗೆ ಹಣದಲ್ಲೇ ಬೆಡ್ ಖರೀದಿಸಿದ್ದರೆ ಹಣ ಉಳಿಯುತ್ತಿತ್ತು. ಇದರಲ್ಲಿ ಎಷ್ಟು ಸಾವಿರ ಕೋಟಿ ರೂ. ಕೊಳ್ಳೆ ಹೊಡೆದಿದ್ದೀರಿ? ನನಗೆ ಕೊರೊನಾ ಸೋಂಕು ದೃಢಪಟ್ಟಾಗ ಮಣಿಪಾಲ್ ಆಸ್ಪತ್ರೆಯಲ್ಲಿ 5.8 ಲಕ್ಷ ರೂ. ಪಡೆದರು. ಬಡವರು ಇಷ್ಟು ದೊಡ್ಡ ಮೊತ್ತವನ್ನು ಎಲ್ಲಿಂದ ತರುತ್ತಾರೆ ಎಂದು ಬಿಎಸ್ ಯಡಿಯೂರಪ್ಪ ಅವರಿಗೆ ತಿಳಿಸಿದ್ದೆ ಎಂದರು.
ನಾನು ಇದುವರೆಗೆ ಆರೋಗ್ಯ ವಿಚಾರದಲ್ಲಿ ಸರ್ಕಾರದಿಂದ ಯಾವುದೇ ರೀತಿಯ ಹಣ ಪಡೆದಿಲ್ಲ. ಶಾಸಕರಿಗೆ 2 ಲಕ್ಷ ರೂ. ವೇತನವಿದೆ. ನಾನು ಕಮಿಟಿಯ ಸಭೆಗೆ ಹೋದರೆ 65 ಸಾವಿರ ರೂ. ಸಿಗುತ್ತದೆ. ಹಣವನ್ನು ತೆಗೆದುಕೊಂಡರೆ ನಾವು ಮನುಷ್ಯರಾ? ಎಂದು ಹೇಳಿದರು.