ಬೆಂಗಳೂರು,ಏ 20(Daijiworld News/MSP): ದಕ್ಷ, ಪ್ರಾಮಾಣಿಕ, ಹಿರಿಯ ಐಪಿಎಸ್ ಅಧಿಕಾರಿ ಡಾ. ಮಧುಕರ್ ಶೆಟ್ಟಿ ಸಾವಿನ ಬಗ್ಗೆ ಸಂಶಯಗಳಿದ್ದು, ಅವರ ಸಾವು ಯಾವ ಕಾರಣದಿಂದ ಸಂಭವಿಸಿದೆ ಎಂಬ ಬಗ್ಗೆ ತನಿಖೆ ಅಗತ್ಯವಿದೆ ಎಂಬ ಕೂಗಿನ ನಡುವೆ ನಾಲ್ಕು ತಿಂಗಳು ಕಳೆದು ಹೋಗಿದೆ.
ಆದರೆ ಇದೀಗ ಅವರ ಸಾವನಪ್ಪಿದ್ದು ಕೊಲೆಯಿಂದಲೋ.?ಅಥವಾ ಸಹಜ ಸಾವೋ..?ಎನ್ನುವ ಅನುಮಾನಗಳ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸಲು ಚಿಂತನೆ ನಡೆಸಿ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡಲು ತಜ್ಞರ ಸಮಿತಿ ನೇಮಿಸಿರುವ ವಿಚಾರ ತಡವಾಗಿ ಹೊರಬಿದ್ದಿದೆ.
ಈ ತನಿಖಾ ಸಮಿತಿಯಲ್ಲಿ ಪ್ರಮುಖ ವೈದ್ಯರ ತಂಡವಿದ್ದು ನಾರಾಯಣ ಹೃದಯಾಲಯದ ಡಾ. ದೇವಿಪ್ರಸಾದ್ ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿಸಿದ್ದು, ಉಳಿದಂತೆ ಸದಸ್ಯರನ್ನಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರು, ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಕಾರ್ಡಿಯೋಥೊರಾಸಿಕ್ ಸರ್ಜರಿ ವಿಭಾಗದ ಡಾ. ಸೀತಾರಾಮ್ ಭಟ್, ನಿಮ್ಹಾನ್ಸ್ನ ವೈರಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ವಿ. ರವಿ, ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯ ಎದೆರೋಗ ವಿಭಾಗದ ಡಾ. ನಾಗರಾಜ ಅವರನ್ನು ನೇಮಕ ಮಾಡಲಾಗಿದೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರನ್ನು ಸಂಚಾಲಕರನ್ನಾಗಿ ನೇಮಿಸಿದ್ದು, ಎರಡು ವಾರಗಳಲ್ಲಿ ವರದಿ ನೀಡುವಂತೆ ಆದೇಶದಲ್ಲಿ ತಿಳಿಸಿದೆ.
ಹೈದ್ರಾಬಾದ್ನ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಮಧುಕರ್ ಶೆಟ್ಟಿ ಅವರಿಗೆ ದಿಢೀರ್ ಕಾಣಿಸಿಕೊಂಡ ಅನಾರೋಗ್ಯದಿಂದ ಹೈದ್ರಾಬಾದಿನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಡಿ.25ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಭ್ರಷ್ಟರ ಪಾಲಿಗೆ ಸಿಂಹಸ್ವಪ್ನ ಆಗಿದ್ದ ಖಡಕ್ ಅಧಿಕಾರಿ ಸಾವಿನ ಸುತ್ತ ಹಲವಾರು ಅನುಮಾನ ಹುಟ್ಟುಹಾಕಿಕೊಂಡಿತ್ತು.