ಮುಂಬೈ, ಡಿ 26 (DaijiworldNews/AA): ಮಾನವ ಕಳ್ಳಸಾಗಾಣಿಕೆಯ ಶಂಕೆಯಿಂದ ಪ್ಯಾರಿಸ್ ನಲ್ಲಿ ತಡೆಹಿಡಿಯಲ್ಪಟ್ಟಿದ್ದ ರೊಮೇನಿಯನ್ ವಿಮಾನವು ಮುಂಬೈ ವಿಮಾನ ನಿಲ್ದಾಣಕ್ಕೆ ಮರಳಿದೆ. ಈ ವಿಮಾನವು ಫ್ರೆಂಚ್ ಅಧಿಕಾರಿಗಳು ಅನುಮತಿ ನೀಡಿದ ಬಳಿಕ ತನ್ನ ಪ್ರಯಾಣವನ್ನು ಪುನರಾರಂಭಿಸಿದೆ.
ದುಬೈನಿಂದ 303 ಮಂದಿ ಪ್ರಯಾಣಿಕರೊಂದಿಗೆ ಹೊರಟ ವಿಮಾನವನ್ನು ಮಾನವ ಕಳ್ಳಸಾಗಾಣಿಕೆಯ ಶಂಕೆಯಿಂದ ಕಳೆದ ಗುರುವಾರ ಪ್ಯಾರೀಸ್ ನ 150 ಕಿ.ಮೀ. ದೂರದ ವಟ್ರಿ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿತ್ತು. ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರ 303 ಮಂದಿ ಪೈಕಿ 276 ಮಂದಿ ಪ್ರಯಾಣಿಕರು ಭಾರತೀಯರು ಇದ್ದರು ಎನ್ನಲಾಗಿದೆ.
ಇನ್ನು ಈ ಪ್ರಯಾಣಿಕರ ಪೈಕಿ 25 ಮಂದಿ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿ ಅಲ್ಲೇ ಉಳಿದುಕೊಂಡಿದ್ದಾರೆ. ಡಿ. 25 ರ ಬೆಳಗ್ಗೆಯೇ ವಿಮಾನ ಟೇಕ್ ಆಫ್ ಆಗುವ ನಿರೀಕ್ಷೆಯಿತ್ತು, ಆದರೆ ಕೆಲವು ಪ್ರಯಾಣಿಕರು ಭಾರತಕ್ಕೆ ಮರಳಲು ಬಯಸದ ಕಾರಣ ಡಿ. 25 ರ ಮಧ್ಯಾಹ್ನ 2:30 ರ ನಂತರ ಹೊರಟು ಇಂದು ಬೆಳಗ್ಗೆ 4 ಗಂಟೆಗೆ ಮುಂಬೈಗೆ ಮರಳಿದೆ ಎಂದು ತಿಳಿದುಬಂದಿದೆ.