ಚಿಕ್ಕೋಡಿ, ಡಿ 25 (DaijiworldNews/MR): ರಾಜ್ಯದ ರೈತರು ಬರದಿಂದ ಕಂಗೆಟ್ಟು ಕೂತಿದ್ದಾರೆ. ಸರ್ಕಾರವೂ ಏನು ಮಾಡಬೇಕು ಎಂದು ತೋಚದೆ ಕಂಗಾಲಾಗಿದೆ. ಅದರ ನಡುವೆ ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಉಡಾಫೆ ಮಾತೊಂದನ್ನು ಆಡಿದ್ದಾರೆ. ಬರಗಾಲ ಬಂದರೆ ರೈತರು ಸಾಲ ಮನ್ನಾದ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ, ಅದಕ್ಕೆ ಬರಗಾಲ ಬರಲಿ ಎಂದು ರೈತರಿಗೆ ಆಸೆ ಇರುತ್ತದೆ ಎಂದು ಹೇಳುವ ಮೂಲಕ ರೈತರನ್ನು ಅಪಮಾನಿಸಿದ್ದಾರೆ.
ರೈತರ ವಿಚಾರದಲ್ಲಿ ಹಗುರವಾಗಿ ಮಾತನಾಡಿರುವ ಸಚಿವ ಶಿವಾನಂದ ಪಾಟೀಲ್ ಅವರು, ರೈತರಿಗೆ ಸಾಲ ಮನ್ನಾದ ನಿರೀಕ್ಷೆ ಇದೆ. ಹಿಂದಿನ ಸರ್ಕಾರಗಳು ಸಾಲ ಮನ್ನಾ ಮಾಡಿವೆ. ಆದರೆ ಸರ್ಕಾರ ಸಂಕಷ್ಟದಲ್ಲಿದ್ದಾಗ ಸಾಲ ಮನ್ನಾ ಮಾಡುವುದು ಕಷ್ಟ ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ರೈತರು ಬೆಳೆ ಬೆಳೆಯಬೇಕು ಎಂದಿದ್ದಾರೆ.
ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವರಾಗಿದ್ದುಕೊಂಡು ರೈತರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಾಗಿದ್ದ ಶಿವಾನಂದ ಪಾಟೀಲ್ ಅವರು ರೈತರನ್ನು ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿರುವುದು ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ನಿಮ್ಮ ಸರ್ಕಾರಕ್ಕೆ ಸರಿಯಾದ ಬರ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ. ಜನರ ಸಂಕಷ್ಟ ಪರಿಹರಿಸುವ ಮನಸ್ಸಿಲ್ಲ. ಹೀಗಾಗಿ ಇಂಥ ಹೇಳಿಕೆಗಳನ್ನು ನೀಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.