ನವದೆಹಲಿ, ಡಿ, 23 (daijiworldNews/MR): ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರದ ಭಾರೀ ಮುಖಭಂಗ ಅನುಭವಿಸಿದ ಹಿನ್ನೆಲೆ ಮತ್ತು 2024ರ ನಿರ್ಣಾಯಕ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಪಕ್ಷ ತನ್ನ ಸಂಘಟನೆಯಲ್ಲಿ ಬದಲಾವಣೆ ಮಾಡಿದೆ. ಹೊಸ ರಚನೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಯುಪಿ ಕಾಂಗ್ರೆಸ್ ಉಸ್ತುವಾರಿ ಹುದ್ದೆಯಿಂದ ಮುಕ್ತಗೊಳಿಸಲಾಗಿದೆ. ಇದಲ್ಲದೆ, ಸಚಿನ್ ಪೈಲಟ್ ಅವರನ್ನು ಛತ್ತೀಸ್ಗಢದ ಕಾಂಗ್ರೆಸ್ ಉಸ್ತುವಾರಿಯಾಗಿ ಮತ್ತು ರಮೇಶ್ ಚೆನ್ನಿಥಾಲಾ ಅವರನ್ನು ಮಹಾರಾಷ್ಟ್ರದ ಎಐಸಿಸಿ ಉಸ್ತುವಾರಿಯಾಗಿ ಕಾಂಗ್ರೆಸ್ ನೇಮಿಸಿದೆ.
ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಮುಕುಲ್ ವಾಸ್ನಿಕ್ ಅವರನ್ನು ಗುಜರಾತ್ನ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಜಿತೇಂದ್ರ ಸಿಂಗ್ ಅವರನ್ನು ಅಸ್ಸಾಂ ಮತ್ತು ಮಧ್ಯಪ್ರದೇಶಕ್ಕೆ ನಿಯೋಜಿಸಲಾಗಿದೆ.
ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ದೀಪಕ್ ಬಾಬರಿಯಾ ದೆಹಲಿ ಮತ್ತು ಹರಿಯಾಣವನ್ನು ನೋಡಿಕೊಳ್ಳಲಿದ್ದಾರೆ. ಉತ್ತರ ಪ್ರದೇಶಕ್ಕೆ ಅವಿನಾಶ್ ಪಾಂಡೆ ಅವರನ್ನು ಉಸ್ತುವಾರಿಯಾಗಿ ನೇಮಿಸಿದೆ. ಉತ್ತರಾಖಂಡದ ಉಸ್ತುವಾರಿಯಾಗಿ ಕುಮಾರಿ ಸೆಲ್ಜಾ, ಅವರನ್ನು ನೇಮಿಸಲಾಗಿದೆ ಎಂದು ವರದಿಯಾಗಿದೆ.