ಹಿಂದೂ ಮಹಾಸಾಗರ, ಡಿ 23 (daijiworldNews/MR): ಹಿಂದೂ ಮಹಾಸಾಗರ ಸಮುದ್ರದಲ್ಲಿ ವ್ಯಾಪಾರಿ ಹಡಗಿನ ಮೇಲೆ ಡ್ರೋನ್ ದಾಳಿ ನಡೆದಿದ್ದು, ಭಾರೀ ಸ್ಫೋಟದ ಸದ್ದು ಕೇಳಿ ಬಂದ ಘಟನೆ ನಡೆದಿದೆ. ಈ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ. ಈ ಹಡಗಿನಲ್ಲಿ 20 ಭಾರತೀಯ ಸಿಬ್ಬಂದಿ ಇದ್ದರು. ದಾಳಿಗೊಳಗಾದ ಹಡಗಿನತ್ತ ಭಾರತೀಯ ಕರಾವಳಿ ಕಾವಲು ಪಡೆಯ ನೌಕೆ ಧಾವಿಸಿದೆ.
ಈ ದಾಳಿಯು ಪೋರ್ ಬಂದರ್ ಕರಾವಳಿಯಿಂದ 217 ನಾಟಿಕಲ್ ಮೈಲ್ಸ್ ದೂರದಲ್ಲಿ ನಡೆದಿದ್ದು. ಮಂಗಳೂರು ಕಡೆಗೆ ಬರುತ್ತಿದ್ದ ವ್ಯಾಪಾರಿ ಹಡಗಿನ ಮೇಲೆ ಡ್ರೋನ್ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಕಚ್ಚಾ ತೈಲವನ್ನು ಹೊತ್ತ ಹಡಗು ಸೌದಿ ಅರೇಬಿಯಾದ ಬಂದರಿನಿಂದ ಮಂಗಳೂರು ಕಡೆಗೆ ಬರುತ್ತಿತ್ತು. ಭಾರತೀಯ ವಿಶೇಷ ಆರ್ಥಿಕ ವಲಯದಲ್ಲಿ ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್ ಹಡಗು ಐಸಿಜಿಎಸ್ ವಿಕ್ರಮ್ಗೆ ಸಂಕಷ್ಟದಲ್ಲಿರುವ ವ್ಯಾಪಾರಿ ಹಡಗಿನ ಕಡೆಗೆ ಹೋಗುವಂತೆ ಸೂಚಿಸಲಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ತೊಂದರೆಯಲ್ಲಿ ಸಿಲುಕಿರುವ ಹಡಗಿಗೆ ನೆರವು ನೀಡುವಂತೆ ಕೋಸ್ಟ್ ಗಾರ್ಡ್ ನೌಕೆಯು ಆ ಪ್ರದೇಶದಲ್ಲಿನ ಎಲ್ಲಾ ಹಡಗುಗಳಿಗೆ ಸೂಚಿಸಿದೆ. ಮೂಲಗಳ ಪ್ರಕಾರ ಡ್ರೋನ್ ದಾಳಿಯಿಂದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯನ್ನು ನಂದಿಸಲಾಗದೆಯಾದರೂ ಹಡಗಿನ ಕಾರ್ಯನಿರ್ವಹಣೆಗೆ ಅಡ್ಡಿಯಾಗಿದೆ. ಹಾಗೆಯೇ ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿಯು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.