ಫ್ರಾನ್ಸ್,ಡಿಸೆಂಬರ್23(daijiworldNews/RA):ಕೇಂದ್ರ ಅಮೆರಿಕದ ನಿಕರಾಗುವಾಗೆ ತೆರಳುತ್ತಿದ್ದ 303 ಮಂದಿ ಭಾರತೀಯರಿದ್ದ ವಿಮಾನವೊಂದನ್ನು ಫ್ರಾನ್ಸ್ ನ ಅಧಿಕಾರಿಗಳು ಮಾನವ ಕಳ್ಳಸಾಗಣೆ ಶಂಕೆಯ ಮೇಲೆ ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿಸಿ ವಶಕ್ಕೆ ಪಡೆದುಕೊಂಡಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ.
ಪ್ಯಾರಿಸ್ ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯ ಪ್ರಕಾರ 303 ಭಾರತೀಯ ಪ್ರಯಾಣಿಕರನ್ನು ಹೊತ್ತ ವಿಮಾನವು ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಟೇಕಾಫ್ ಆಗಿತ್ತು.
ರೊಮೇನಿಯನ್ ಕಂಪನಿ ಲೆಜೆಂಡ್ ಏರ್ಲೈನ್ಸ್ನ A340 ವಿಮಾನವು ಇಂಧನ ತುಂಬಲು ಲ್ಯಾಂಡ್ ಆಗಿತ್ತು.
ಲ್ಯಾಂಡಿಂಗ್ ನಂತರ ಮಾನವ ಕಳ್ಳಸಾಗಣೆ ಅನುಮಾನದ ಮೇಲೆ ತನಿಖೆಗಾಗಿ ವಿಮಾನವನ್ನು ವ್ಯಾಟ್ರಿ ವಿಮಾನ ನಿಲ್ದಾಣದಲ್ಲೇ ಉಳಿಸಿಕೊಳ್ಳಲಾಗಿದೆ ಎಂದು ಅದು ತಿಳಿಸಿದರು. ಫ್ರಾನ್ಸ್ ನ ಸಂಘಟಿತ ಅಪರಾಧಗಳ ತಡೆ ಘಟಕವು ಈ ಕುರಿತು ತನಿಖೆಯನ್ನು ಕೈಗೆತ್ತಿಕೊಂಡಿದೆ.
ವಿಮಾನದಲ್ಲಿರುವವರು ಭಾರತೀಯ ಮೂಲದವರಾಗಿದ್ದು, ಕೇಂದ್ರ ಅಮೆರಿಕಕ್ಕೆ ತೆರಳಿ ಅಲ್ಲಿಂದ ಯುನೈಟೆಡ್ ಸ್ಟೇಟ್ಸ್ ಅಥವಾ ಕೆನಡಾಗೆ ಅಕ್ರಮವಾಗಿ ನುಸುಳಲು ತೆರಳುತ್ತಿರುವ ಶಂಕೆ ವ್ಯಕ್ತವಾಗಿದೆ ಎಂದು ‘ಎಎಫ್ಪಿ’ ಸುದ್ದಿಸಂಸ್ಥೆ ಹೇಳಿದೆ.
ಫ್ರಾನ್ಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಕೂಡ ಈ ಕುರಿತು ತನಿಖೆಯನ್ನು ಪ್ರಾರಂಭಿಸಿದೆ.