ರಾಯಚೂರು, ಏ 19(Daijiworld News/MSP): ಇತ್ತೀಚೆಗೆ ರಾಯಚೂರಿನಲ್ಲಿ ನಡೆದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ದೊರಕ್ಕಿದ್ದು, ಆಕೆಯ ಸಾವು ಆತ್ಮಹತ್ಯೆಯಲ್ಲ ಬದಲಿಗೆ 'ರೇಪ್ ಆಂಡ್ ಮರ್ಡರ್ ' ಎನ್ನುವ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ರಾಯಚೂರಿನ ಮಾಣಿಕಪ್ರಭು ದೇವಸ್ಥಾನದ ಹಿಂದಿನ ಬೆಟ್ಟ ಪ್ರದೇಶದಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವಿನ ಪ್ರಕರಣದ ಮತ್ತೊಂದು ಮುಖ ಬೆಳಕಿಗೆ ಬಂದಿದ್ದು ಮೃತ ವಿದ್ಯಾರ್ಥಿನಿ ಮಧು ತಾಯಿ ರೇಣುಕಾದೇವಿ ನೀಡಿದ ದೂರಿನ ಮೇರೆಗೆ ಪೊಲೀಸರು ಅತ್ಯಾಚಾರ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಈ ಪ್ರಕರಣದ ವಿರುದ್ದ ರಾಜ್ಯದೆಲ್ಲೆಡೆ ಜಸ್ಟಿಸ್ ಫಾರ್ ಮಧು ಎಂಬ ಹ್ಯಾಶ್ ಟ್ಯಾಗ್ ನಡಿಯಲ್ಲಿ ಅಭಿಯಾನ ಆರಂಭವಾಗಿದ್ದು ಈ ನಡುವೆ ಸಿಎಂ ಕುಮಾರಸ್ವಾಮಿ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ " ರಾಯಚೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವಿನ ಪ್ರಕರಣ ಅತೀವ ನೋವು ತಂದಿದೆ. ಈ ಪ್ರಕರಣದ ಕುರಿತು ರಾಯಚೂರು ಎಸ್ ಪಿ ಯವರಿಂದ ಮಾಹಿತಿ ಪಡೆದಿದ್ದು ಒಬ್ಬನನ್ನು ಬಂಧಿಸಿದ್ದು ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ. ಆಕೆಯ ಹೆತ್ತವರಿಗೆ ಭಗವಂತ ಈ ನೋವು ಭರಿಸುವ ಶಕ್ತಿ ಕೊಡಲಿ. ಹೆಣ್ಣುಮಕ್ಕಳ ಮೇಲಿನ ಇಂತಹ ಪೈಶಾಚಿಕ ಕೃತ್ಯ ಖಂಡನೀಯ " ಎಂದಿದ್ದಾರೆ.
ಘಟನೆಯ ವಿವರ:
ರಾಯಚೂರಿನ ನವೋದಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಮಧು ಪತ್ತಾರ್ ಏಪ್ರಿಲ್ 13 ರಂದು ಕಾಣೆಯಾಗಿದ್ದಳು. ಎಲ್ಲೆಡೆ ಪೋಷಕರು ಹುಡುಕಾಡಿ ದಾರಿ ಕಾಣದೆ ಪೊಲೀಸ್ ದೂರು ದಾಖಲಿಸಿದ್ದರು. ಐಡಿಎಸ್ ಎಂಟಿ ಬಡಾವಣೆ ನಿವಾಸಿ ಮಧು ಪತ್ತಾರ್ ಅವರು ಐದನೇ ಸೆಮಿಸ್ಟರ್ ಸಿವಿಲ್ ಇಂಜಿನಿಯರಿಂಗ್ ಅಭ್ಯಾಸಿಸುತ್ತಿದ್ದರು. ಆದ್ರೆ ಮಧುವಿನ ಹುಟ್ಟುಹಬ್ಬದ ಮುಂಚಿನ ದಿನ ಅಂದರೆ ಏ.16 ಕ್ಕೆ ಆಕೆ ಶವವಾಗಿ ಪತ್ತೆಯಾಗಿದ್ದಾಳೆ. ಮೊದಲಿಗೆ ಆತ್ಮಹತ್ಯೆ ಎಂದು ಪೊಲೀಸರು ತಿಳಿಸಿದ್ದು , ಆದ್ರೆ ಆಕೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗುತ್ತಲೇ ವಿದ್ಯಾರ್ಥಿ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿ ಹೋರಾಟದ ರೂಪ ಪಡೆಯಿತು.
ಈ ನಡುವೆ ಮಧು ತಾಯಿ ರೇಣುಕಾದೇವಿವರು ಅತ್ಯಾಚಾರ, ಕೊಲೆ ಪ್ರಕರಣ ದೂರು ನೀಡಿದ್ದು, ಈ ದೂರಿನನ್ವಯ ಮಧು ಸ್ನೇಹಿತ ಆರೋಪಿ ಸುದರ್ಶನ್ ಎಂಬಾತನನ್ನು ಬಂಧಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಳಿಕವಷ್ಟೇ ಸತ್ಯಾಂಶ ಹೊರಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ . ಮಧು ಸಾವಿನ ವಿರುದ್ದ ಸಿಡಿದೆದ್ದಿರುವ ವಿದ್ಯಾರ್ಥಿಗಳು ಆಕೆಯ ಸಾವಿಗೆ ನ್ಯಾಯ ಸಿಗಬೇಕು ಇಲ್ಲವಾದರೆ ರಾಯಚೂರು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.