ನವದೆಹಲಿ, ಡಿ 20 (DaijiworldNews/AA): "ನನ್ನನ್ನು ಎಷ್ಟು ಅವಮಾನ ಮಾಡುತ್ತೀರಿ ಎಂಬುದರ ಕುರಿತು ನಾನು ತಲೆಕೆಡಿಸಿಕೊಳ್ಳುವುದಿಲ್ಲ ಆದರೆ ನನ್ನ ಹುದ್ದೆ, ಸಮುದಾಯದ ಮೇಲಿನ ದಾಳಿ ಸಹಿಸುವುದಿಲ್ಲ " ಎಂದು ಉಪರಾಷ್ಟ್ರಪತಿ ಜಗದೀಪ್ ಧಂಖರ್ ಹೇಳಿದ್ದಾರೆ.
ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ತನ್ನನ್ನು ಅಣಕ ಮಾಡಿರುವ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದ ಅವರು, "ನನ್ನನು ಅವಮಾನಿಸಿದರೂ ಪರವಾಗಿಲ್ಲ ಆದರೆ ನಾನು ಭಾರತದ ಉಪರಾಷ್ಟ್ರಪತಿ, ರೈತ ಸಮುದಾಯ, ನನ್ನ ಸಮುದಾಯದ ಮೇಲಿನ ದಾಳಿಯನ್ನು ಸಹಿಸುವುದಿಲ್ಲ. ಹಾಗೂ ನನ್ನ ಸ್ಥಾನದ ಗೌರವವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದನ್ನು ನಾನು ಸಹಿಸಿಕೊಳ್ಳಲಾರೆ" ಎಂದು ತಿಳಿಸಿದರು.
ಈವರೆಗೆ ಸಂಸತ್ತಿಸಲ್ಲಿ ಅಶಿಸ್ತಿನ ಕಾರಣಕ್ಕಾಗಿ 143 ಸಂಸದರನ್ನು ಅಮಾನತುಗೊಳಿಸಲಾಗಿದೆ. ಈ ಹಿಂದೆ ಅಮಾನತುಗೊಂಡ ಸಂಸದರು ಪ್ರತಿಭಟನೆ ನಡೆಸಿದ್ದು, ಈ ವೇಳೆ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಉಪರಾಷ್ಟ್ರಪತಿ ಜಗದೀಪ್ ಧನ್ಖರ್ ಅವರನ್ನು ಅಣಕಿಸಿರುವುದು ವಿವಾದಕ್ಕೆ ಕಾರಣವಾಗಿತ್ತು. ಬ್ಯಾನರ್ಜಿ ಅವರು ಉಪರಾಷ್ಟ್ರಪತಿ ಧನ್ಖರ್ ಅವರನ್ನು ಅಣಕಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೇ ಬ್ಯಾನರ್ಜಿ ಅವರ ಅಪಹಾಸ್ಯ ಮಾಡಿರುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು.