ದೆಹಲಿ, ಡಿ 20 (DaijiworldNews/PC) : ಬಾಡಿಗೆ ಮನೆಯಲ್ಲಿ ನೆಲೆಸಿದ್ದ ೯ ವರ್ಷದ ಬಾಲಕಿಯನ್ನು ಮನೆ ಮಾಲೀಕನೇ ಅಪಹರಿಸಿ , ಅತ್ಯಾಚಾರ ಮಾಡಿ ಕೊಂದು ಶವ ಕಾಲುವೆಗೆ ಎಸೆದ ಭೀಕರ ಘಟನೆ ದೆಹಲಿಯ ಸ್ವರೂಪ್ನಗರದಲ್ಲಿ ನಡೆದಿದೆ.
ಆರೋಪಿಯನ್ನು ಸಂಜೀವ್ ರಾಣಾ( 52) ಎಂದು ಗುರುತಿಸಲಾಗಿದೆ.
ಈತ ತನ್ನ ಮನೆಯೊಂದನ್ನು ಕಾರ್ಖಾನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿಗಳಿಗೆ ನಾಲ್ಕೈದು ವರ್ಷದ ಹಿಂದೆ ಬಾಡಿಗೆಗೆ ನೀಡಿದ್ದ. ದಂಪತಿಗಳ ಪುತ್ರಿ ಮನೆ ಬಳಿ ಆಟವಾಡುತ್ತಿದ್ದಾಗ ಮನೆ ಮಾಲೀಕ ಸಂಜೀವ್ ರಾಣಾ ಕಾರಿನಲ್ಲಿ ಕರೆದೊಯ್ಯುವ ಆಮಿಷವೊಡ್ದಿದ್ದಾನೆ. ಬಳಿಕ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಒಯ್ದು ಲೈಂಗಿಕ ಕಿರುಕುಳ ನೀಡಿ ಹತ್ಯೆ ಮಾಡಿ ಆಕೆಯ ಶವವನ್ನು ಕಾಲುವೆಗೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯನ್ನು ಕಾರಿನಲ್ಲಿ ಕರೆದುಯ್ಯುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾದ ಹಿನ್ನಲೆಯಲ್ಲಿ ರಾಣಾನಿಗಾಗಿ ಪೊಲೀಸರು ಬಲೆ ಬೀಸಿದ್ದರು.
ಈ ನಡುವೆ ಆರೋಪಿ ರಾಣಾ ವಾಹನ ಅಪಘಾತವಾಗಿದ್ದು , ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಹೇಳಿಕೆ ನೀಡಲು ಆತ ಸಮರ್ಥನಾಗಿದ್ದು, ಬಾಲಕಿಯನ್ನು ಕೊಂದು ಶವವನ್ನು ಮುನಕ್ ಕಾಲುವೆಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ ರವಿ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಬಾಲಕಿ ನಾಪತ್ತೆಯಾದ ನಂತರ, ರಾಣಾ ಬಾಲಕಿ ಕುಟುಂಬವನ್ನು ಭೇಟಿ ಸಾಂತ್ವಾನ ಹೇಳುವುದು , ಆಕೆಗಾಗಿ ಹುಡುಕಾಟ ನಡೆಸುತ್ತಾ ತನ್ನ ಮೇಲೆ ಅನುಮಾನ ಬಾರದಂತೆ ನಟಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ
ಘಟನೆಯ ಕುರಿತಂತೆ ಸ್ವಯಂ ಪ್ರೇರಿತವಾಗಿ ದೆಹಲಿ ಮಹಿಳಾ ಆಯೋಗವು ಪೊಲೀಸರಿಂದ ಮಾಹಿತಿ ಕೇಳಿದೆ