ನವದೆಹಲಿ, ಎ19(Daijiworld News/SS): ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್ ಕಾರ್ಯಕರ್ತರ ಅಮಾನತನ್ನು ತೆರವುಗೊಳಿಸಿದ್ದಕ್ಕೆ ನೊಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಪಕ್ಷ ತೊರೆದಿದ್ದಾರೆ.
ಉತ್ತರ ಪ್ರದೇಶದ ಮಥುರಾದಲ್ಲಿ ಪತ್ರಿಕಾಗೋಷ್ಠಿ ನಡೆಸುವ ವೇಳೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಪ್ರಿಯಾಂಕಾ ಚತುರ್ವೇದಿ ಜೊತೆ ಅನುಚಿತವಾಗಿ ವರ್ತಿಸಿದ್ದರು. ಈ ಕುರಿತು ದೂರು ನೀಡಿದ ನಂತರ ಪಕ್ಷವು ಆ ಕಾರ್ಯಕರ್ತರನ್ನು ಅಮಾನತುಗೊಳಿಸಿತ್ತು. ಆದರೆ, ಉತ್ತರ ಪ್ರದೇಶದ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧ್ಯಾ ಅಮಾನತು ಆದೇಶವನ್ನು ಹಿಂಪಡೆದಿದ್ದರು. ಇದು ಪ್ರಿಯಾಂಕಾ ಚತುರ್ವೇದಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.
ಇದೀಗ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್ ಕಾರ್ಯಕರ್ತರ ಅಮಾನತನ್ನು ತೆರವುಗೊಳಿಸಿದ್ದಕ್ಕೆ ಅಸಮಾಧಾನಗೊಂಡಿರುವ ಪ್ರಿಯಾಂಕ ಪಕ್ಷವನ್ನೇ ತೊರೆದಿದ್ದಾರೆ. ಮಾತ್ರವಲ್ಲ, ತಮ್ಮ ರಾಜಿನಾಮೆ ಪತ್ರವನ್ನು ಪಕ್ಷದ ಮುಖಂಡರಿಗೆ ರವಾನಿಸಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕಾ ಚತುರ್ವೇದಿ, ಕಷ್ಟಪಟ್ಟು ದುಡಿಯುವವರ ಬದಲು ಕೊಳಕು ಗೂಂಡಾಗಳಿಗೆ ಪಕ್ಷ ಆದ್ಯತೆ ನೀಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಬೆವರು ಮತ್ತು ರಕ್ತ ಹರಿಸಿ ಕಷ್ಟಪಟ್ಟು ದುಡಿಯುವವರ ಬದಲು ಕೊಳಕು ಗೂಂಡಾಗಳಿಗೆ ಆದ್ಯತೆ ಸಿಗುತ್ತಿರುವುದು ಬೇಸರ ತಂದಿದೆ. ಪಕ್ಷಕ್ಕಾಗಿ ಸಾಕಷ್ಟು ಅಡೆತಡೆಗಳನ್ನು ಎದುರಿಸಿದ್ದರೂ ನಮ್ಮದೇ ಪಕ್ಷದೊಳಗೆ ನನಗೆ ಬೆದರಿಕೆ ಹಾಕುವವರಿಗೆ ಕನಿಷ್ಠ ಪಕ್ಷ ಛೀಮಾರಿ ಕೂಡ ಹಾಕದೆ ಹಾಗೇ ಬಿಡುತ್ತಾರೆ ಎಂದು ದೂರಿದ್ದಾರೆ.