ನವದೆಹಲಿ, ಡಿ 19 (DaijiworldNews/MS): ಸಂಸತ್ತಿನ ಉಭಯ ಸದನಗಳಲ್ಲಿ ಇಂದು ಮಂಗಳವಾರ ಮತ್ತೆ ಭದ್ರತಾ ಉಲ್ಲಂಘನೆ ಪ್ರಕರಣದ ಗದ್ದಲ, ಕೋಲಾಹಲ ಮುಂದುವರಿದ ಹಿನ್ನಲೆಯಲ್ಲಿ 49 ಮಂದಿ ಸಂಸದರನ್ನು ಅಮಾನತುಗೊಳಿಸಿ ಸ್ಪೀಕರ್ ಓಂ ಬಿರ್ಲಾ ಆದೇಶಿಸಿದ್ದಾರೆ.
ಫಾರೂಕ್ ಅಬ್ದುಲ್ಲ, ಡಿಂಪಲ್ ಯಾದವ್, ಸುಶೀಲ್ ಕುಮಾರ್ ರಿಂಕು, STಹಸನ್, ಡ್ಯಾನಿಶ್ ಅಲಿ, ಮನೀಶ್ ತಿವಾರಿ, ಚಂದ್ರೇಶ್ವರ ಪ್ರಸಾದ್, ಶಶಿ ತರೂರ್, ಸುಪ್ರಿಯಾ ಸುಳೆ, ಕಾರ್ತಿ ಚಿದಂಬರಂ, ರಾಜೀವ್ ರಂಜನ್, ಗೀತಾ ಕೋಡಾ, ಗುರ್ಜಿತ್ ಸಿಂಗ್ ಸೇರಿದಂತೆ 49 ಎಂಪಿಗಳು ಸಸ್ಪೆಂಡ್ ಆಗಿದ್ದಾರೆ. ಇದರೊಂದಿಗೆ ಅಮಾನತುಗೊಂಡ ಸಂಸತ್ ಸದಸ್ಯರ ಸಂಖ್ಯೆ (ಲೋಕಸಭೆ 95, ರಾಜ್ಯಸಭೆ-46) 141ಕ್ಕೆ ಏರಿದೆ.
ಇದು ಸಂಸತ್ತಿನ ಇತಿಹಾಸದಲ್ಲಿ ಇದುವರೆಗೆ ಅತ್ಯಧಿಕವಾಗಿದೆ. ಸಂಸದರ ಅಮಾನತು ನಂತರ ಪ್ರತಿಪಕ್ಷಗಳು ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಬಹಿಷ್ಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
"ಬಿಜೆಪಿಗೆ ವಿರೋಧ ಪಕ್ಷ-ಮುಕ್ತ ಲೋಕಸಭೆ ಬೇಕು ಎಂಬುದು ಸ್ಪಷ್ಟವಾಗಿದೆ. ರಾಜ್ಯಸಭೆಯಲ್ಲೂ ಅದೇ ರೀತಿ ಮಾಡುತ್ತಾರೆ. ಅವರು ಯಾವುದೇ ಚರ್ಚೆಯಿಲ್ಲದೆ ತಮ್ಮ ಮಸೂದೆಗಳನ್ನು ಅಂಗೀಕರಿಸಲು ಬಯಸುತ್ತಾರೆ. ಇದು ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ ಎಂದು ನಾನು ಭಾವಿಸುತ್ತೇನೆ" ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.