ಬೆಂಗಳೂರು, ಎ19(Daijiworld News/SS): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾದರೆ, ಪಕ್ಕದಲ್ಲೇ ಇದ್ದು ಅವರಿಗೆ ಎಲ್ಲ ರೀತಿಯ ಸಹಕಾರ ನೀಡುವೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ನಾನು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವುದಿಲ್ಲ. ಬಿಜೆಪಿಯ ಲಾಲ್ಕೃಷ್ಣ ಅಡ್ವಾಣಿ ಅವರಂತೆ ನಾನು ರಾಜಕೀಯ ನಿವೃತ್ತಿ ಹೊಂದುವುದಿಲ್ಲ. ಮೂರು ವರ್ಷಗಳ ಹಿಂದೆ ನಾನು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಮಾತು ಹೇಳಿದ್ದೆ. ಆದರೆ, ಪರಿಸ್ಥಿತಿಯ ಅನಿವಾರ್ಯತೆಯಿಂದಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಯಿತು ಎಂದು ತಿಳಿಸಿದರು.
ನನಗೆ ಪ್ರಧಾನಿಯಾಗುವ ಯಾವುದೇ ಚಿಂತನೆಗಳಿಲ್ಲ. ಮೋದಿ ಮತ್ತೊಮ್ಮೆ ಸಂಸತ್ ಭವನ ಪ್ರವೇಶಿಸುತ್ತಾರಲ್ಲಾ ಎಂಬುದರ ಬಗ್ಗೆ ಮಾತ್ರ ನನ್ನ ಚಿಂತನೆಗಳು ನೆಟ್ಟಿವೆ. ಈ ಮಾತನ್ನು ಮೋದಿ ಅವರಿಗೆ ನೇರವಾಗಿ ಹೇಳುವ ಧೈರ್ಯ ಮತ್ತು ದಾಷ್ಟಿಕತೆ ನನ್ನಲ್ಲಿ ಇದೆ. ರಾಹುಲ್ ಗಾಂಧಿ ಪ್ರಧಾನಿ ಆದಲ್ಲಿ, ಅವರ ಪಕ್ಕದಲ್ಲೇ ಕುಳಿತು ಅವರಿಗೆ ಸಹಕರಿಸುವ ಮೂಲಕ ಸೂಕ್ತ ಮಾರ್ಗದರ್ಶನ ನೀಡುತ್ತೇನೆ. ಇದಕ್ಕಾಗಿ ಪ್ರಧಾನಿ ಆಗಲೇ ಬೇಕೆಂದೇನಿಲ್ಲ ಎಂದು ಹೇಳಿದ್ದಾರೆ.
ರಾಜಕೀಯ ವಿಚಾರದಲ್ಲಿ ಮುಚ್ಚಿಡುವಂತದ್ದು ಏನೂ ಇಲ್ಲ. ನನಗೆ ಜೀವನದಲ್ಲಿ ಇನ್ನಾವುದೇ ಮಹತ್ವಾಕಾಂಕ್ಷೆ ಉಳಿದಿಲ್ಲ. ಆದರೆ, ನಾನೆಂದೂ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುವುದಿಲ್ಲ ಎಂದು ಸ್ಪಷ್ಟಪಡಿಸಿದರು.