ಮಧ್ಯಪ್ರದೇಶ, ಡಿ 18 (DaijiworldNews/RA): ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದ ಸಫಾರಿ ಝೋನ್ ಗೆ ʻಅಗ್ನಿʼ ಮತ್ತು ʻವಾಯುʼ ಹೆಸರಿನ ಗಂಡು ಚೀತಾಗಳನ್ನ ಬಿಡುಗಡೆಗೊಳಿಸಿದ್ದು, ಜನರಿಗೆ ಇವುಗಳ ವೀಕ್ಷಣೆಯ ಅವಕಾಶ ನೀಡಲಾಗುತ್ತದೆ.
ಇವುಗಳನ್ನು ಉದ್ಯಾನವನದ ವ್ಯಾಪ್ತಿಯ ಅಹೆರಾ ಪ್ರವಾಸೋದ್ಯಮ ವಿಭಾಗದ ಪರೋಂಡ್ ಅರಣ್ಯ ವಲಯಕ್ಕೆ ಬಿಡಲಾಗಿದೆ ಎಂದು ತಿಳಿದು ಬಂದಿದೆ. ಅರಣ್ಯ ವಿಭಾಗದ ಪಶುವೈದ್ಯರು ಈ ಎರಡೂ ಚೀತಾಗಳ ಆರೋಗ್ಯ ಉತ್ತಮವಾಗಿರುವುದನ್ನು ಖಚಿತಪಡಿಸಿದ ಬಳಿಕ ಸಫಾರಿ ಝೋನ್ ಗೆ ಬಿಡಲಾಗಿದೆ.
ಚೀತಾ ಮರುಪರಿಚಯಿಸುವ ಯೋಜನೆ ಅಡಿಯಲ್ಲಿ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನಮೀಬಿಯಾದಿಂದ ಆ ನಂತರ ದಕ್ಷಿಣ ಆಫ್ರಿಕಾದಿಂದ ತರಲಾದ 20 ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿತ್ತು.
ಅಂದಿನಿಂದ ಅಲ್ಲಿ 4 ಮರಿಗಳು ಜನಿಸಿದ್ದವು.ಆದ್ರೆ ವಿವಿಧ ಕಾರಣಗಳಿಂದಾಗಿ ಮಾರ್ಚ್ ನಿಂದ 6 ವಯಸ್ಕ ಚೀತಾಗಳು ಸಾವನ್ನಪ್ಪಿದ್ದವು. ಮೂರು ಮರಿಗಳು ಸೇರಿದಂತೆ ಒಟ್ಟು 9 ಚೀತಾಗಳು ಮೃತಪಟ್ಟವು. ಆ ನಂತರ ಉಳಿದ ಚೀತಾಗಳನ್ನು ಪಶುವೈದ್ಯರ ನಿಗಾದಲ್ಲಿ ಇರಿಸಲಾಗಿತ್ತು.