ನವದೆಹಲಿ, ಎ19(Daijiworld News/SS): ಕಾಂಗ್ರೆಸ್ ಪಕ್ಷ 2019ರ ಲೋಕಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ, ಸಾಲ ಮಾಡಿರುವ ರೈತರನ್ನು ಯಾವುದೇ ಕಾರಣಕ್ಕೂ ಜೈಲಿಗಟ್ಟಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಕೇವಲ 20 ಸಾವಿರ ರೂ. ಸಾಲ ಮಾಡಿ ಮರುಪಾವತಿ ಮಾಡಲು ಸಾಧ್ಯವಾಗದೇ ಇರುವ ರೈತರನ್ನು ಜೈಲಿಗಟ್ಟಲಾಗುತ್ತಿದೆ. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೀಗಾಗುವುದಿಲ್ಲ. ದೊಡ್ಡ ದೊಡ್ಡ ಸುಸ್ತಿದಾರರನ್ನು ಜೈಲಿಗೆ ಕಳುಹಿಸುವವರೆಗೆ ಯಾವೊಬ್ಬ ರೈತರನ್ನೂ ಕಂಬಿ ಎಣಿಸುವಂತೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಈಗಿರುವ ಸರಕಾರ ಸಾವಿರಾರು ಕೋಟಿ ರೂ. ಸಾಲ ಮಾಡಿರುವ ದೊಡ್ಡ ದೊಡ್ಡ ಉದ್ಯಮಿಗಳನ್ನು ಜೈಲಿಗಟ್ಟುವ ಬದಲು, ಅವರಿಗೆ ವಿದೇಶಕ್ಕೆ ಪರಾರಿಯಾಗಲು ಅವಕಾಶ ನೀಡುತ್ತಿದೆ ಎಂದು ಆರೋಪಿಸಿದರು.
ಒಂದು ವೇಳೆ ನಮ್ಮ ಸರ್ಕಾರ ಅಧಿ ಕಾರಕ್ಕೆ ಬಂದರೆ, ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುತ್ತೇವೆ ಮತ್ತು ಕನಿಷ್ಠ ಬೆಂಬಲ ಬೆಲೆ ಘೋಷಿಸುತ್ತೇವೆ ಎಂದು ನುಡಿದಿದ್ದಾರೆ.