ಹೈದರಾಬಾದ್, ಡಿ 16 (DaijiworldNews/AA): ಸಾಧಿಸುವ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಅನುದೀಪ್ ದುರಿಶೆಟ್ಟಿ ಅವರೇ ಸಾಕ್ಷಿ. ಅವರು 2017 ರಲ್ಲಿ ಯುಪಿಎಸ್ ಸಿ ಇತಿಹಾಸದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿದರು.
ಅನುದೀಪ್ ದುರಿಶೆಟ್ಟಿ ಅವರು BITS ಪಿಲಾನಿಯಲ್ಲಿ ತಮ್ಮ ಪದವಿ ಶಿಕ್ಷಣ ಮುಗಿಸಿದರು. ಆ ಬಳಿಕ ಸಾಫ್ಟ್ವೇರ್ ಇಂಜಿನಿಯರ್ ಆಗಿ ಗೂಗಲ್ನಲ್ಲಿ ಕೆಲಸ ಮಾಡುತ್ತಿದ್ದರು. ದೇಶ ಸೇವೆಯ ಬಯಕೆಯಿಂದ ಯುಪಿಎಸ್ ಸಿ ಪರೀಕ್ಷೆ ಬರೆಯಲು ನಿರ್ಧರಿಸಿ ಅದಕ್ಕಾಗಿ ತಯಾರಿ ಆರಂಭಿಸಿದರು. 2012ರಲ್ಲಿ ಮೊದಲ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಬರೆದು ವಿಫಲರಾದರು. ಆದರೆ ಛಲ ಬಿಡದೆ 2013 ಮತ್ತೆ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದರೂ, ಶ್ರೇಯಾಂಕವು IRS ನಲ್ಲಿ ಸ್ಥಾನ ಗಳಿಸುವಷ್ಟಿತ್ತು.
ಅನುದೀಪ್ ಅವರು ತಮ್ಮ ಪ್ರಯತ್ನವನ್ನು ಬಿಡದೇ 2014 ಮತ್ತು 2015 ರಲ್ಲಿ ಮತ್ತೆ ಪರೀಕ್ಷೆಯನ್ನು ಬರೆಯುತ್ತಾರೆ. ಆದರೆ ಅವರಿಗೆ ತಾವು ಅಂದುಕೊಂಡಿದ್ದ ಅಂಕ ಗಳಿಸಲು ಸಾಧ್ಯವಾಗಿರಲಿಲ್ಲ. ಕೊನೆಗೆ 2017 ರಲ್ಲಿ ಮತ್ತೆ ಯುಪಿಎಸ್ ಸಿ ಪರೀಕ್ಷೆ ಬರೆದ ಅವರು, ಮೊದಲ ಶ್ರೇಣಿಯೊಂದಿಗೆ ಅಗ್ರಸ್ಥಾನ ಪಡೆಯುವುದರ ಜೊತೆಗೆ ಯುಪಿಎಸ್ ಸಿ ಇತಿಹಾಸದಲ್ಲಿ ಅತ್ಯಧಿಕ ಅಂಕ ಗಳಿಸಿದರು. ವಿಶೇಷವೆಂದರೆ ಅನುದೀಪ್ ಅವರು ಯಾವುದೇ ಕೋಚಿಂಗ್ ಇಲ್ಲದೆ 2025 ರಲ್ಲಿ 1126 ಅಂಕಗಳನ್ನು ಗಳಿಸಿದರು. ಪ್ರಸ್ತುತ ಅವರು ಹೈದರಾಬಾದ್ ನ ಡೆಪ್ಯುಟಿ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನು ಅನುದೀಪ್ ಅವರು ತಮ್ಮ ಕನಸನ್ನು ನನಸಾಗಿಸಿಕೊಳ್ಳುವುದರಲ್ಲಿ ಅವರ ಕುಟುಂಬವು ಪ್ರಮುಖ ಪಾತ್ರ ವಹಿಸುತ್ತದೆ. ಸಾಫ್ಟವೇರ್ ಇಂಜಿನಿಯರ್ ಉದ್ಯೋಗ ತೊರೆದು ಯುಪಿಎಸ್ ಸಿ ಪರೀಕ್ಷೆ ಬರೆಯಲು ನಿರ್ಧರಿಸಿದಾಗ ಹಾಗೂ ಅನುದೀಪ್ ಪ್ರಥಮ ಪ್ರಯತ್ನದಲ್ಲಿ ಸೋತರೂ ಅವರ ಕುಟುಂಬವು ಅವರಿಗೆ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಬಹಳಷ್ಟು ಸಹಕಾರವನ್ನು ನೀಡುತ್ತದೆ. ಇದೇ ರೀತಿ ಯುವಕರ ಕನಸಿಗೆ ಕುಟುಂಬ ಬೆಂಬಲವಾಗಿ ನಿಂತರೆ ಉತ್ತಮ ಸಮಾಜ ನಮ್ಮದಾಗುತ್ತದೆ.