ನವದೆಹಲಿ, ಡಿ 15 (DaijiworldNews/AA): ಉತ್ತರ ಪ್ರದೇಶದ ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನದ ಪಕ್ಕದಲ್ಲಿರುವಂತಹ ಶಾಹಿ ಈದ್ಗಾ ಸಂಕೀರ್ಣದ ಪ್ರಾಥಮಿಕ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ ನೀಡಿತ್ತು. ಇದೀಗ ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ.
ಅಲಹಾಬಾದ್ ಹೈಕೋರ್ಟ್ ಡಿ. 14 ರಂದು ಈದ್ಗಾ ಸಂಕೀರ್ಣದ ಪ್ರಾಥಮಿಕ ಸಮೀಕ್ಷೆಯನ್ನು ಮಾಡಲು ನ್ಯಾಯಾಲಯದ ಮೇಲ್ವಿಚಾರಣೆಯ ಮೂವರು ವಕೀಲ ಕಮಿಷನರ್ಗಳ ತಂಡಕ್ಕೆ ಅನುಮತಿ ನೀಡಿತ್ತು. ಬಳಿಕ ಕೋರ್ಟ್ ನ ಈ ಆದೇಶವನ್ನು ಪ್ರಶ್ನಿಸಿ ಮಸೀದಿ ಸಮಿತಿಯು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ವಿಎನ್ ಭಟ್ ಅವರ ಪೀಠವು ಈ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ.
ಇನ್ನು ಭೂ ವಿವಾದಕ್ಕೆ ಸಂಬಂಧಿಸಿದ ಮೊಕದ್ದಮೆಗಳನ್ನು ಒಗ್ಗೂಡಿಸಿ ವರ್ಗಾಯಿಸುವ ಹೈಕೋರ್ಟ್ ನ ಮೇ 2023ರ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಈ ಅರ್ಜಿಯನ್ನು ಜನವರಿ 9 ರಂದು ವಿಶೇಷ ರಜೆ ಕಾಲ ಪೀಠವು ವಿಚಾರಣೆಯನ್ನು ನಡೆಸಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಈದ್ಗಾ ಸಂಕೀರ್ಣದ ಸಮೀಕ್ಷೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ ಹಾಗೂ ಅರ್ಜಿಗಳ ವರ್ಗಾವಣೆ ಆದೇಶದ ಸವಾಲಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಜನವರಿ 9 ರಂದು ವಿಚಾರಣೆ ನಡೆಸಲಿದೆ ಹೀಗಾಗಿ ಹೈಕೋರ್ಟ್ ಆದೇಶವು ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.