ಬೆಂಗಳೂರು, ಡಿ 08 (DaijiworldNews/MS): ಕೆಲ ದಿನಗಳಿಂದ ಅನಾರೋಗ್ಯ ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ದಕ್ಷಿಣ ಭಾರತದ ಹಿರಿಯ ನಟಿ ಲೀಲಾವತಿ ವಿಧಿವಶವಾಗಿದ್ದಾರೆ.
ನಟಿ ಲೀಲಾವತಿ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆಯೂ ಕಂಡಿತ್ತು. ಆದರೆ ಇಂದು ಮಧ್ಯಾಹ್ನ ಏಕಾಏಕಿ ಲೀಲಾವತಿ ಅವರಿಗೆ ಲೋ ಬಿಪಿ ಉಂಟಾಗಿದೆ. ಕೂಡಲೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಕಳೆದ ಕೆಲವು ದಿನಗಳಿಂದ ಲೀಲಾವತಿ ಅವರು ಆರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದಿದ್ದರು. ಲೀಲಾವತಿ ಅವರ ಆರೋಗ್ಯ ವಿಚಾರಿಸಲು ಡಾ.ಶಿವರಾಜ್ ಕುಮಾರ್, ದರ್ಶನ್, ಚಿರಂಜೀವಿ ಸರ್ಜಾ, ಅಭಿಷೇಕ್ ಅಂಬರೀಶ್, ಗಿರಿಜಾ ಲೋಕೇಶ್ ಹೀಗೆ ಹಲವಾರು ನಟ ನಟಿಯರು ಹಾಗೂ ಸಿಎಂ ಸಿದ್ಧರಾಮಯ್ಯನವರೂ ಅವರ ಮನೆಗೆ ಭೇಟಿ ನೀಡಿದ್ದರು.
50 ವರ್ಷಗಳ ಕಾಲ ಚಿತ್ರರಂಗಕ್ಕೆ ಲೀಲಾವತಿ ಸೇವೆ ಸಲ್ಲಿಸಿದ್ದ ಲೀಲಾವತಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದ ಅವರು, ಕನ್ನಡದಲ್ಲಿ ಅಷ್ಟೇ ಅಲ್ಲ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಚಿತ್ರಗಳಲ್ಲಿ ನಟಿಸಿದ್ದರು.