ಕಲಬುರಗಿ, ಡಿ 08 (DaijiworldNews/PC): ಕಲಬುರಗಿಯಲ್ಲಿ ನಡೆದ ವಕೀಲನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಗಳಲ್ಲಿ ಹಂತಕರನ್ನು ಕಲಬುರಗಿ ವಿಶ್ವವಿದ್ಯಾಲಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅವ್ವಣ್ಣಾ ನಾಯಿಕೊಡಿ, ಮಲ್ಲಿನಾಥ್ ನಾಯಿಕೊಡಿ, ಭಾಗೇಶ್ ಬಂಧಿತ ಆರೋಪಿಗಳಾಗಿದ್ದು. ಮತ್ತೊಬ್ಬ ಪ್ರಮುಖ ಆರೋಪಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
ಬಂಧಿತ ಆರೋಪಿಗಳು ಕಲಬುರಗಿ ಲಾಡ್ಜ್ ನಲ್ಲಿ ಉಳಿದುಕೊಂಡು ನಾಲ್ಕು ದಿನದಿಂದ ಈರಣ್ಣಗೌಡ ಕೊಲೆಗೆ ಹೊಂಚು ಹಾಕಿದ್ದರು. ಸಾಕಷ್ಟು ಬಾರಿ ಕೋರ್ಟ್ ಹಾಗೂ ಮನೆ ಬಳಿ ಹೋಗಿ ಹತ್ಯೆಗೆ ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದ್ದು, ಹತ್ಯೆಗೆ ಕಾರಣವೇನು ಎನ್ನುವುದನ್ನು ಪೊಲೀಸರು ವಿಚಾರಣೆ ನಡೆಸಬೇಕಾಗಿದೆ.
ವಕೀಲ ಈರಣ್ಣಗೌಡ ಕೋರ್ಟ್ಗೆ ಹೋಗುವ ಸಂದರ್ಭದಲ್ಲಿ ಹಂತಕರು ಏಕಾಏಕಿ ಎರಗಿದ್ದರು. ಮಾರಕಾಸ್ತ್ರ ಹಿಡಿದು ಬರೋಬ್ಬರಿ ಅರ್ಧ ಕಿಲೋಮೀಟರ್ ಅಟ್ಟಾಡಿಸಿಕೊಂಡು ಹೋಗಿ ಹತ್ಯೆ ಮಾಡಿದ್ದರು. ಈರಣ್ಣ ಲೈಸೆನ್ಸ್ ಗನ್ ಹೊಂದಿದ್ದು, ಅದನ್ನು ತೆಗೆಯಬೇಕು ಎನ್ನುವಷ್ಟರಲ್ಲೇ ಕೊಚ್ಚಿ ಕೊಂದಿದ್ದರು. ಈರಣ್ಣ ಗನ್ ತೆಗೆಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಕಲಬುರಗಿ ನಗರದ ಸಾಯಿ ಮಂದಿರ ಬಳಿಯಿರುವ ಅಪಾರ್ಟ್ಮೆಂಟ್ ಬಳಿ ಈ ಘಟನೆ ನಡೆದಿತ್ತು