ನವದೆಹಲಿ, ಡಿ 07 (DaijiworldNews/MR): ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ಅವರು ಗುರುವಾರ ತೆಲಂಗಾಣದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಬಿಜೆಪಿ ಸ್ಪಷ್ಟ ಬಹುಮತವನ್ನು ಹೊಂದಿದ್ದರೂ, ಅವರಿಗೆ ಮುಖ್ಯಮಂತ್ರಿಯನ್ನು ನೇಮಿಸಲು ಸಾಧ್ಯವಾಗುತ್ತಿಲ್ಲ. ಗುರುವಾರ ನಡೆಯಲಿರುವ ಹಿರಿಯ ನಾಯಕರ ಸಭೆಯಲ್ಲಿ ಎಲ್ಲಾ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಹೆಸರುಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ರಾಜಸ್ಥಾನದ ಸಿಎಂ ಹುದ್ದೆಯ ಆಕಾಂಕ್ಷಿ ವಸುಂಧರಾ ರಾಜೆ ಬುಧವಾರ ರಾತ್ರಿ ದೆಹಲಿಗೆ ಧಾವಿಸಿದ್ದು, ಇದು ಕುತೂಹಲವನ್ನು ಹೆಚ್ಚಿಸಿದೆ. ಆದರೆ, ಸಿಎಂ ಸ್ಥಾನದ ಬಗ್ಗೆ ಕೇಳಿದಾಗ, ಅವರು ಉತ್ತರಿಸಲು ನಿರಾಕರಿಸಿದ್ದು, ದೆಹಲಿ ವಿಮಾನ ನಿಲ್ದಾಣದ ಹೊರಗೆ, "ನಾನು ನನ್ನ ಸೊಸೆಯನ್ನು ನೋಡಲು ದೆಹಲಿಗೆ ಬಂದಿದ್ದೇನೆ" ಎಂದು ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಸಂಸದರು ಬುಧವಾರ ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದ್ದಾರೆ. ರಾಜೀನಾಮೆ ನೀಡಿದ ಪ್ರಮುಖ ನಾಯಕರಲ್ಲಿ ನರೇಂದ್ರ ತೋಮರ್, ಪ್ರಹ್ಲಾದ್ ಪಟೇಲ್, ರೀತಿ ಪಾಠಕ್, ರಾಜೇಶ್ ಸಿಂಗ್, ಉದಯ್ ಪ್ರತಾಪ್ ಸಿಂಗ್, ರಾಜಸ್ಥಾನದ ರಾಜವರ್ಧನ್ ಸಿಂಗ್ ರಾಥೋಡ್, ಕಿರೋರಿಲಾಲ್ ಮೀನಾ ಮತ್ತು ದಿಯಾ ಕುಮಾರಿ ಸೇರಿದ್ದಾರೆ.
ಎರಡು ಬಾರಿ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದ ವಸುಂಧರಾ ರಾಜೆ ಈ ಸಾಧನೆ ಮಾಡಿದ ಏಕೈಕ ಮುಖ್ಯಮಂತ್ರಿ ಎಂದು ಪರಿಗಣಿಸಲಾಗಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಕೇವಲ 69 ಸ್ಥಾನಗಳಿಗೆ ಸೀಮಿತವಾಗಿದ್ದರೆ, ಬಿಜೆಪಿ 115 ಸ್ಥಾನಗಳಲ್ಲಿ ಜಯಗಳಿಸಿತು. ರಾಜೆ ಅವರು ಮೂರನೇ ಬಾರಿಗೆ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.