ಬೆಳಗಾವಿ, ಡಿ 07 (DaijiworldNews/MR): ಟಿಪ್ಪರ್ ಮತ್ತು ಕಾರಿನ ಮಧ್ಯೆ ನಡೆದ ಭೀಕರ ರಸ್ತೆ ಅಪಘಾತದ ಪರಿಣಾಮ ಇಬ್ಬರು ಸಜೀವ ದಹನವಾದ ದಾರುಣ ಘಟನೆ ಬೆಳಗಾವಿ ತಾಲೂಕಿನ ದೇವಗಿರಿ ಬಂಬರಗಾ ಕ್ರಾಸ್ ಬಳಿ ನಡೆದಿದೆ.
ಒಂದೇ ಕುಟುಂಬದ ನಾಲ್ವರು ರಾತ್ರಿ ಬಂಬರಗಾ ಗ್ರಾಮಕ್ಕೆ ಕಾರಿನಲ್ಲಿ ಹೊರಟಿದ್ದು, ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸಾಗುತ್ತಿದ್ದರು. ಬಂಬರಗಾ ಕ್ರಾಸ್ ಬಳಿ ಅಡ್ಡ ಬಂದ ಟಿಪ್ಪರ್ಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಟಿಪ್ಪರ್ನ ಡಿಸೇಲ್ ಟ್ಯಾಂಕ್ ಒಡೆದ ಕೂಡಲೇ ಬೆಂಕಿ ಹೊತ್ತಿಕೊಂಡಿದೆ.
ಕ್ಷಣಾರ್ಧದಲ್ಲಿ ಕಾರು ಮತ್ತು ಟಿಪ್ಪರ್ಗೆ ಬೆಂಕಿ ಹೊತ್ತಿಕೊಂಡಿದ್ದು, ಈ ವೇಳೆ ಕಾರಿನಲ್ಲಿದ್ದ ಇಬ್ಬರು ಸಜೀವ ದಹನಗೊಂಡಿದ್ದಾರೆ. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಬಂಬರಗಾ ಗ್ರಾಮದ ಮೋಹನ್ ಮಾರುತಿ ಬೆಳ್ಗಾಂವಕರ್(24), ಮಚ್ಚೆ ಗ್ರಾಮದ ಬಾಲಕಿ ಸಮಿಕ್ಷಾ ಡಿಯೇಕರ್(12) ಮೃತ ದುರ್ದೈವಿಗಳು.
ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯರು ಇವರನ್ನು ರಕ್ಷಿಸಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಮಹೇಶ್ ಬೆಳ್ಗಾಂವಕರ್ ಮತ್ತು ಸ್ನೇಹಾ ಬೆಳ್ಗುಂದ್ಕರ್ ಗಂಭೀರ ಗಾಯಗಳಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ಆಗುತ್ತಿದ್ದಂತೆ ಟಿಪ್ಪರ್ ಡ್ರೈವರ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ಸ್ನೇಹಾ, ಎಸಿಪಿ ಮತ್ತು ಕಾಕತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಬ್ಬರ ಶವವನ್ನು ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.