ನವದೆಹಲಿ, ಡಿ 06 (DaijiworldNews/MR): ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಎರಡು ಮಸೂದೆಗಳನ್ನು ಲೋಕಸಭೆಯಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದ್ದಾರೆ.
ಜಮ್ಮು-ಕಾಶ್ಮೀರ ಮೀಸಲಾತಿ ತಿದ್ದುಪಡಿ ಮಸೂದೆ ಮತ್ತು ಜಮ್ಮು-ಕಾಶ್ಮೀರ ಪುನರ್ ಸಂಘಟನೆ ತಿದ್ದುಪಡಿ ಮಸೂದೆ ಎಂಬ ಮಸೂದೆ ಮಂಡಿಸಲಾಗಿದೆ. ಮಸೂದೆಗಳು ಮಂಡಿನೆ ಬಳಿಕ ಮಾತನಾಡಿದ ಅಮಿತ್ ಶಾ, ನಾವು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಕೂಡಲೇ ಪಾಕ್ ಆಕ್ರಮಿತ ಕಾಶ್ಮೀರವನ್ನು ಸಾಧಿಸುವುದೇ ನಮ್ಮ ಗುರಿ ಎಂದು ಹೇಳಿದರು.
ಯಾರಿಗೂ ಕಾಶ್ಮೀರಿ ಜನರ ಬಗ್ಗೆ ಕಾಳಜಿ ಇಲ್ಲ. ಅವರಿಗೆ ನ್ಯಾಯ ಕೊಡಿಸೋ ಕೆಲಸ ಮೋದಿ ಸರ್ಕಾರ ಮಾಡಲಿದೆ. ಆರ್ಟಿಕಲ್ 370 ರದ್ಧತಿ ನಂತರ ಕಾಶ್ಮೀರಿಗರು ತಮ್ಮ ಹಕ್ಕುಗಳನ್ನು ಪಡೆಯುತ್ತಿದ್ದಾರೆ. ಇನ್ಮುಂದೆ ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು, ಅಲ್ಲಿ ವಾಸಿಸುವ ಎಲ್ಲರಿಗೂ ತಮ್ಮ ಹಕ್ಕುಗಳು ಸಿಗಲಿವೆ ಎಂದರು.
ಪಾಕ್ ಆಕ್ರಮಿತ ಕಾಶ್ಮೀರದಿಂದ ಚುನಾವಣೆ ಗೆದ್ದು ಬರೋರಿಗೆ ಸದನದಲ್ಲಿ 24 ಸೀಟು ಮೀಸಲು ಇರಿಸಿದ್ದೇವೆ. ಕಾಶ್ಮೀರದ 2 ಮಸೂದೆಗಳಲ್ಲಿ ಮಹಿಳೆ ಸೇರಿದಂತೆ ಇಬ್ಬರು ಕಾಶ್ಮೀರಿ ವಲಸಿಗ ಸಮುದಾಯದ ಸದಸ್ಯರನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಜಮ್ಮು ಮತ್ತು ಕಾಶ್ಮೀರವು ಅಭೂತಪೂರ್ವ ಬದಲಾವಣೆಗೆ ಸಾಕ್ಷಿಯಾಯಿತು. ಜಮ್ಮು ಮತ್ತು ಕಾಶ್ಮೀರದ ಮೊದಲ ಮಲ್ಟಿಪ್ಲೆಕ್ಸ್ ಸಿನೆಮಾವನ್ನು ಮೋದಿ ಸರ್ಕಾರದ ಆಡಳಿತದಲ್ಲಿ ಸ್ಥಾಪಿಸಲಾಯಿತು ಎಂಬುದನ್ನು ಗಮನಿಸಬೇಕು.
ಪ್ರಸ್ತುತ, ಈ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಚಲನಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ ಮತ್ತು ಯಾವುದೇ ಹಣದ ಕೊರತೆಯಿಲ್ಲದೆ 100ಕ್ಕೂ ಹೆಚ್ಚು ಚಿತ್ರಮಂದಿರಗಳನ್ನು ನಿರ್ಮಿಸುವ ಯೋಜನೆಗಳಿವೆ ಎಂದರು.
ಪ್ರಧಾನಿ ಮೋದಿ ಮಾತ್ರ ಜನರ ನೋವನ್ನು ನಿಜವಾಗಿಯೂ ಅರ್ಥಮಾಡಿಕೊಂಡು ಅದನ್ನು ಕಡಿಮೆ ಮಾಡಲು ದಣಿವರಿಯದೆ ಕೆಲಸ ಮಾಡಿದರು ಎಂದು ಅವರು ಹೇಳಿದರು. 2014 ರಿಂದ 2023 ರವರೆಗೆ ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ, ಕೇವಲ 2,000 ಭಯೋತ್ಪಾದಕ ಘಟನೆಗಳು ನಡೆದಿವೆ 70% ರಷ್ಟು ಕಡಿಮೆಯಾಗಿದೆ ಎಂದರು.