ನವದೆಹಲಿ, ಡಿ 06 (DaijiworldNews/AK): ಪ್ಯಾಕಿಂಗ್ ಆಹಾರ ಉತ್ಪನ್ನಗಳ ಸೇವನೆಯಿಂದ ಜಠರದಲ್ಲಿರುವ ಪ್ರೋಬಯಾಟಿಕ್ ಬ್ಯಾಕ್ಟೀರಿಯಾವನ್ನು ಹಾನಿಗೊಳಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇದರಿಂದ ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳು ಬರುವ ಸಾಧ್ಯತೆ ಇದೆ ಎಂದು ದೆಹಲಿ ಏಮ್ಸ್ ವೈದ್ಯರ ವರದಿ ತಿಳಿಸಿದೆ.
ಜಠರದಲ್ಲಿರುವ ಪ್ರೋಬಯಾಟಿಕ್ ಬ್ಯಾಕ್ಟೀರಿಯಾ ಆಹಾರವನ್ನು ಜೀರ್ಣಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಅಲ್ಲದೇ ಇದನ್ನು ಉತ್ತಮ ಬ್ಯಾಕ್ಟೀರಿಯಾ ಎಂದು ಪರಿಗಣಿಸಲಾಗುತ್ತದೆ. ನಿರಂತರವಾಗಿ ಪ್ಯಾಕಿಂಗ್ ಆಹಾರಗಳನ್ನು ಸೇವಿಸುವುದರಿಂದ ಈ ಆಹಾರ ಪ್ರೋಬಯಾಟಿಕ್ ಬ್ಯಾಕ್ಟೀರಿಯಾ ದೇಹದಿಂದ ಹೊರ ಹಾಕುತ್ತದೆ ಎಂದು ದೆಹಲಿ ಏಮ್ಸ್ ವೈದ್ಯರು ನಡೆಸಿದ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಆಹಾರವನ್ನು ಜೀರ್ಣಿಸಿಕೊಳ್ಳುವುದು ಮತ್ತು ಅದರಿಂದ ಪೋಷಕಾಂಶಗಳನ್ನು ಹೊರತೆಗೆದು ದೇಹದ ವಿವಿಧ ಭಾಗಗಳಿಗೆ ತಲುಪಿಸುವುದು ಪ್ರೋಬಯಾಟಿಕ್ ಬ್ಯಾಕ್ಟೀರಿಯಾದ ಕೆಲಸವಾಗಿದೆ. ಸಂಸ್ಕರಿಸಿದ ಆಹಾರದಲ್ಲಿ ಇರುವ ಹೆಚ್ಚಿನ ಕೊಬ್ಬು ಮತ್ತು ಹೆಚ್ಚಿನ ಸಕ್ಕರೆ ಈ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮೊದಲಿಗೆ ದೇಹದಲ್ಲಿ ಊತವಿರುತ್ತದೆ. ಬಳಿಕ ಕ್ರಮೇಣ ವ್ಯಕ್ತಿಗೆ ಮಧುಮೇಹ, ರಕ್ತದೊತ್ತಡ, ಶ್ವಾಸಕೋಶದ ಸೋಂಕು, ಕ್ಯಾನ್ಸರ್, ನರಸಂಬಂಧಿ ಸಮಸ್ಯೆಗಳು ಅಲ್ಲದೇ ಬೇರೆ ಸಮಸ್ಯೆಗಳು ಪ್ರಾರಂಭವಾಗುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.
ಮೊಮೊಸ್, ನೂಡಲ್ಸ್, ಫ್ರೈಡ್ ರೈಸ್ನಂತಹ ಮೊದಲೇ ತಯಾರಿಸಿದ ಆಹಾರವನ್ನು ಸೇವಿಸಬಾರದು. ಪ್ರೋಬಯಾಟಿಕ್ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಮೊಸರು, ಹಾಲಿನಂತಹ ಇತರ ಆಹಾರ ಪದಾರ್ಥಗಳನ್ನು ಸೇವಿಸಬೇಕು.