ಬೆಂಗಳೂರು, ಡಿ 06 (DaijiworldNews/AA): ಹಿರಿಯ ಸಾಹಿತಿ, ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹಾಗೂ ಹಿರಿಯ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತ ನ್ಯಾಯಾಲಯ ರಚಿಸಿ, ಪೂರ್ಣಾವಧಿ ನ್ಯಾಯಾಧೀಶರನ್ನು ನೇಮಿಸಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ಮಾಹಿತಿ ನೀಡಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ 2022ರ ಜುಲೈನಿಂದ ನಡೆಯುತ್ತಿದೆ. ಈ ವಿಚಾರಣೆಯು ನಿಧಾನಗತಿಯಲ್ಲಿ ಸಾಗುತ್ತಿದೆ. ಆದ್ದರಿಂದ ಪ್ರಕರಣ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಿ, ಪೂರ್ಣಾವಧಿ ನ್ಯಾಯಾಧೀಶರನ್ನು ನೇಮಿಸುವಂತೆ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆ ಮುಖ್ಯಮಂತ್ರಿಗಳು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
2017 ರ ಸೆ. 5 ರಂದು ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಗೌರಿ ಲಂಕೇಶ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ ರಚಿಸಲಾಗಿತ್ತು. ಈವರೆಗೆ 18 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, 1200 ಪುರಾವೆಗಳನ್ನು, 500ಕ್ಕೂ ಅಧಿಕ ಸಾಕ್ಷ್ಯಗಳನ್ನು ಒಳಗೊಂಡ ಚಾರ್ಚ್ ಶೀಟ್ ಅನ್ನು ಕೋರ್ಟ್ ಗೆ ಸಲ್ಲಿಸಲಾಗಿದೆ.
2015 ರ ಜು.8 ರಂದು ಸಾಹಿತಿ ಎಂ.ಎಂ.ಕಲಬುರ್ಗಿ ಅವರ ಧಾರವಾಡದಲ್ಲಿರುವ ಸ್ವಗೃಹದಲ್ಲಿ ಹತ್ಯೆ ಮಾಡಲಾಗಿತ್ತು. ಹತ್ಯೆಯಾಗಿ ಇದೀಗ ಏಳು ವರ್ಷ ಕಳೆದರೂ ನ್ಯಾಯಾಲಯದಲ್ಲಿ ವಿಚಾರಣೆಗಳು ಮುಂದುವರೆದಿದೆ. ಆದ್ದರಿಂದ ಮೃತರ ಪತ್ನಿ ಉಮಾದೇವಿ ಎಂ. ಕಲಬುರ್ಗಿ ಅವರು ವಿಶೇಷ ನ್ಯಾಯಾಲಯ ರಚಿಸುವಂತೆ ಕೋರಿದ್ದರು.