ಬೆಳಗಾವಿ, ಡಿ 6 (DaijiworldNews/MS): ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಸಮಾವೇಶದಲ್ಲಿ ಐಸಿಸ್ ಸಂಘಟನೆಯ ಜೊತೆಗೆ ಸಂಪರ್ಕವಿರೋ ವ್ಯಕ್ತಿ ಜೊತೆ ಸಿಎಂ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿದ್ದಾರೆ.
ಬೆಳಗಾವಿ ಸುವರ್ಣಸೌಧದಲ್ಲಿ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಮಾವೇಶದ ವೇದಿಕೆಯಲ್ಲಿ ಸಿದ್ದರಾಮಯ್ಯ ಪಕ್ಕದಲ್ಲಿ ಕುಳಿತ ವ್ಯಕ್ತಿ ಐಸಿಸ್ ಸಂಘಟನೆ ಜೊತೆಗೆ ಸಂಪರ್ಕ ಇರುವವನು. ಆ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮಾಹಿತಿ ಇರಲಿಲ್ವಾ? ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.
ಡಿಸೆಂಬರ್ 4ರಂದು ಹುಬ್ಬಳ್ಳಿಯ ಬಾಷಾಪೀರ್ ದರ್ಗಾ ಬಳಿ ನಡೆದಿದ್ದ ದಕ್ಷಿಣ ಭಾರತದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಐಸಿಸ್ ಜತೆ ಸಂಪರ್ಕ ಹೊಂದಿದ ವ್ಯಕ್ತಿ ಸಹ ಭಾಗವಹಿಸಿದ್ದ. ನಾನು ಎಲ್ಲ ಮಾಹಿತಿ ಪಡೆದುಕೊಂಡ ಬಳಿಕವೇ ಈ ಮಾತನ್ನು ಹೇಳುತ್ತಿದ್ದೇನೆ. ಹುಡುಗಾಟಿಕೆಯ ಹೇಳಿಕೆಯಲ್ಲ ಇದು. ಬೇಕಾದರೆ ಮಾಹಿತಿ ತರಿಸಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.
ಭಯೋತ್ಪಾದಕರು ಸಿಎಂ ಜತೆ ವೇದಿಕೆ ಹಂಚಿಕೊಂಡಿದ್ದು ಖಂಡನೀಯ ಎಂದ ಅವರು ಆ ವ್ಯಕ್ತಿ ಯಾರು ಅನ್ನೋದನ್ನು ಇನ್ನೊಂದು ವಾರದಲ್ಲೇ ತಿಳಿಸಿ ಎಲ್ಲಾ ಹೇಳುತ್ತೇನೆ ಎಂದು ಕುತೂಹಲ ಹುಟ್ಟುಹಾಕಿದ್ದಾರೆ.