ದೆಹಲಿ, ಡಿ 05 (DaijiworldNews/PC): ಒಂದು ರಾಜ್ಯ ಅಥವಾ ದೇಶ ಎಂದ ಮೇಲೆ ಕೋಮು ಸಂಘರ್ಷಗಳು ಇದ್ದೇ ಇರುತ್ತದೆ. ಆದರೆ ಅಪರೂಪ ಎಂಬಂತೆ 2022 ಎನ್ಸಿಆರ್ಬಿಯ 'ಕ್ರೈಮ್ ಇನ್ ಇಂಡಿಯಾ ಪ್ರಕಾರ ಉತ್ತರ ಪ್ರದೇಶದಲ್ಲಿ ಒಂದೇ ಒಂದು ಕೋಮು ಅಥವಾ ಧಾರ್ಮಿಕ ಗಲಭೆಗಳು ನಡೆದಿಲ್ಲ.
ಅಪರಾಧ ಪ್ರಕರಣಗಳ ಬಗ್ಗೆ ಎನ್ಸಿಆರ್ಬಿ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ ಕೇರಳದಲ್ಲಿ ದೇಶದಲ್ಲೇ ಅತಿ ಹೆಚ್ಚು ರಾಜಕೀಯ ಗಲಭೆಗಳು ನಡೆದಿದ್ದು, ಅಂತಹ 301 ಘಟನೆಗಳು ನಡೆದಿವೆ. ಒಡಿಶಾದಲ್ಲಿ 224 ಮತ್ತು ಮಹಾರಾಷ್ಟ್ರದಲ್ಲಿ 86 ಗಲಭೆಗಳು ನಡೆದಿವೆ.
2021 ರಲ್ಲಿ ಕೋಮು ಗಲಭೆಗಳು 378 ರಿಂದ 2022 ರಲ್ಲಿ ಕೇವಲ 272 ಕ್ಕೆ ಕಡಿಮೆಯಾಗಿದೆ. 2022 ರಲ್ಲಿ ಮಧ್ಯಪ್ರದೇಶದಲ್ಲಿ 68 ಕೋಮು ಅಥವಾ ಧಾರ್ಮಿಕ ಗಲಭೆಗಳು, ಬಿಹಾರದಲ್ಲಿ 60 ಮತ್ತು ಜಾರ್ಖಂಡ್ನಲ್ಲಿ 46 ಘಟನೆಗಳು ನಡೆದಿವೆ.
2018 ಮತ್ತು 2022 ರ ನಡುವಿನ ಎನ್ಸಿಆರ್ಬಿ ಅಪರಾಧದ ದತ್ತಾಂಶದ ರಾಜ್ಯವಾರು ಹೋಲಿಕೆ ನೋಡಿದರೆ ಕೊಲೆ ಪ್ರಕರಣಗಳಲ್ಲಿ ಇಳಿಕೆ ಕಂಡರೆ, ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ದಾಖಲಾದ ಕೊಲೆ ಪ್ರಕರಣಗಳು ಕ್ರಮವಾಗಿ 21.6% ಮತ್ತು 10.5% ರಷ್ಟು ಏರಿಕೆ ಕಂಡಿದೆ. ಇದಕ್ಕೆ ವ್ಯತಿರಿಕ್ತವಾಗಿ, ಉತ್ತರ ಪ್ರದೇಶವು ಕೊಲೆ ಪ್ರಕರಣಗಳಲ್ಲಿ ಶೇ10 ಕ್ಕಿಂತ ಹೆಚ್ಚು ಇಳಿಕೆ ಕಂಡಿದೆ.