ಬೆಳಗಾವಿ, ಡಿ 04(DaijiworldNews/AK): 4 ವರ್ಷಗಳಿಂದ ಸ್ಥಗಿತಗೊಂಡಿದ್ದ ಶುಚಿ ಯೋಜನೆ ಪುನಾರಂಭಗೊಳ್ಳಲಿದೆ. ಬರುವ ಜನವರಿಯಿಂದ ಶಾಲೆಯ ವಿದ್ಯಾರ್ಥಿನಿಯರಿಗೆ ನ್ಯಾಪ್ಕಿನ್ ವಿತರಣೆಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಇದೇ ಮೊದಲ ಬಾರಿಗೆ ಶಾಲೆಗಳಿಗೆ ತೆರಳಿ ನ್ಯಾಪ್ಕಿನ್ಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಶುಚಿ ಎಂಬ ಮಹತ್ವವಾದ ಯೋಜನೆಯಡಿ ಹೆಣ್ಣುಮಕ್ಕಳಿಗೆ ಇದು ಅತ್ಯಗತ್ಯ. ಆದರೆ ಕಳೆದ 4 ವರ್ಷಗಳಿಂದ ಯೋಜನೆ ಸ್ಥಗಿತವಾಗಿತ್ತು. ಇದೀಗ ನಮ್ಮ ಸರ್ಕಾರ ಬಂದ ಬಳಿಕ ಶುಚಿ ಯೋಜನೆಗೆ ಮರು ಚಾಲನೆ ನೀಡಲಾಗುತ್ತಿದೆ. ಈಗಾಗಲೇ 4 ವಿಭಾಗವಾರು ಟೆಂಡರ್ ಆಹ್ವಾನಿಸಿ ಬಹುತೇಕ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.
10 ವರ್ಷದಿಂದ 18 ವರ್ಷದ ಒಳಗಿನ ಸುಮಾರು 19 ಲಕ್ಷ ವಿದ್ಯಾರ್ಥಿನಿಯರಿಗೆ ನ್ಯಾಪ್ಕಿನ್ ವಿತರಿಸಲು ಯೋಜಿಸಲಾಗಿದೆ. ಸರ್ಕಾರಿ ಶಾಲೆ ಹಾಗೂ ಹಾಸ್ಟೆಲ್ ಮಕ್ಕಳಿಗೂ ನ್ಯಾಪ್ಕಿನ್ಗಳನ್ನು ವಿತರಿಸಲಾಗುವುದು.40.50 ಕೋಟಿ ರೂ. ಯೋಜನೆ ಇದಾಗಿದೆ. ಪ್ರಾಯೋಗಿಕವಾಗಿ ಮೆನ್ಸ್ಟ್ರುವಲ್ ಮುಟ್ಟಿನ ಕಪ್ಗಳನ್ನು ದಕ್ಷಿಣ ಕನ್ನಡ, ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 15 ಸಾವಿರ ಮುಟ್ಟಿನ ಕಪ್ಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.