ನವದೆಹಲಿ, ಡಿ 4 (DaijiworldNews/MR): ಪಂಚರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಮೂರು ರಾಜ್ಯಗಳನ್ನು ಬಿಜೆಪಿ 3ರಲ್ಲಿ ಗೆಲುವು ಸಾಧಿಸಿದೆ. ಕಮಲ ಪಕ್ಷ ಸ್ವಂತ ಬಲದೊಂದಿಗೆ ಆಡಳಿತ ನಡೆಸುತ್ತಿರುವ ರಾಜ್ಯಗಳ ಸಂಖ್ಯೆ ಈಗ 12ಕ್ಕೆ ಏರಿಕೆಯಾಗಿದೆ. ಬಿಜೆಪಿಯು ಮಧ್ಯ ಪ್ರದೇಶದಲ್ಲಿ ಆಡಳಿತವನ್ನು ಉಳಿಸಿಕೊಳ್ಳುವುದರ ಜೊತೆಗೆ, ಕಾಂಗ್ರೆಸ್ ಅಧಿಕಾರದಲ್ಲಿದ್ದ ರಾಜಸ್ಥಾನ ಮತ್ತು ಛತ್ತೀಸ್ಗಢವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಗೆದ್ದ ಮೂರು ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿಬಿಜೆಪಿ ತನ್ನ ಸಿಎಂ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ, ಹೀಗಾಗಿ ಮುಖ್ಯಮಂತ್ರಿ ಯಾರು ಎಂಬುದು ಪ್ರಸ್ತುತ ಕುತೂಹಲದ ವಿಷಯವಾಗಿದ್ದು, ಸಿಎಂ ಸ್ಥಾನಕ್ಕೆ ಭಾರೀ ಪೈಪೋಟಿ ಶುರುವಾಗಿದೆ.
ಮಧ್ಯಪ್ರದೇಶದಲ್ಲಿ ನರೇಂದ್ರ ಸಿಂಗ್ ತೋಮರ್ ಮತ್ತು ಜ್ಯೋತಿರಾಧಿತ್ಯ ಸಿಂಧಿಯಾ ನಡುವೆ ಸಿಎಂ ಸ್ಥಾನಕ್ಕೆ ಪೈಪೋಟಿ ಜೋರಾಗಿದೆ. ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ಕೈಲಾಶ್ ವಿಜಯವರ್ಗಿಯಾ ಕೂಡ ಸಿಎಂ ಸ್ಪರ್ಧೆಯಲ್ಲಿದ್ದಾರೆ.
ಇನ್ನೂ ಈ ಹಿಂದೆ ಕಾಂಗ್ರೆಸ್ ಆಡಳಿತವಿದ್ದ ರಾಜಸ್ಥಾನವನ್ನ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ಸಿಎಂ ಪೈಪೋಟಿಯಲ್ಲಿ ಮಾಜಿ ಸಿಎಂ ವಸುಂಧರಾ ರಾಜೆ, ಸಂಸದೆ ದಿಯಾ ಕುಮಾರಿ ಮತ್ತು ಗಜೇಂದ್ರ ಸಿಂಗ್ ಶೇಖಾವತ್ ಇವರೆಲ್ಲ ಸಂಭಾವ್ಯ ಅಭ್ಯರ್ಥಿಗಳಾಗಿದ್ದಾರೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರಂತೆ ಬಾಲಕ್ ನಾಥ್ ಕೂಡ ಮುಖ್ಯಮಂತ್ರಿಯಾಗಲು ಬಯಸಿದ್ದಾರೆ.
ಬಿಜೆಪಿ ಗೆದ್ದಿರುವಂತ ಮೂರನೇ ರಾಜ್ಯ ಛತ್ತೀಸ್ಗಢದಲ್ಲಿ ಮಾಜಿ ಸಿಎಂ ರಮಣ್ ಸಿಂಗ್, ಬುಡಕಟ್ಟು ನಾಯಕ ವಿಷ್ಣು ದೇವ್ ಸಾಯಿ, ಕೇಂದ್ರ ಸಚಿವ ರೇಣುಕಾ ಸಿಂಗ್ ಮತ್ತು ಮಾಜಿ ರಾಜ್ಯಸಭಾ ಸದಸ್ಯ ರಾಮ್ ವಿಚಾರ್ ನೇತಮ್ ಸ್ಪರ್ಧೆಯಲ್ಲಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಅರುಣ್ ಸಾವೋ ಕೂಡ ಬುಡಕಟ್ಟು ಜನಾಂಗಕ್ಕೆ ಸೇರಿದ್ದು, ಸಿಎಂ ರೇಸ್ನಲ್ಲಿದ್ದಾರೆ. ಇನ್ನೂ ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಒ.ಪಿ.ಚೌಧರಿ ಅವರು ಕೂಡ ಉಪಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಈ ಮೂರು ರಾಜ್ಯಗಳಲ್ಲಿ ಸಿಎಂ ಯಾರಾಗಬೇಕು ಎಂಬುದು ಬಿಜೆಪಿ ಹಿರಿಯ ನಾಯಕರ ಅಂತಿಮ ನಿರ್ಧಾರವಾಗಿದ್ದು ಯಾರಾಗ್ತಾರೆ ಮುಂದಿನ ಮುಖ್ಯಮಂತ್ರಿ ಎಂಬುದು ಪ್ರಸ್ತುತ ಕುತೂಹಲದ ವಿಷಯವಾಗಿದೆ.