ನವದೆಹಲಿ, ಡಿ 03 (DaijiworldNews/MS): ನಿರೀಕ್ಷೆಯಂತೆ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತಪಡುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.
ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸ್ಪಷ್ಟ ಬಹುಮತದತ್ತ ಬಿಜೆಪಿ ದಾಪುಗಾಲಿರಿಸಿದ್ದರೆ, ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದತ್ತ ಹೆಜ್ಜೆ ಇಟ್ಟಿದೆ.
ಮಧ್ಯಪ್ರದೇಶದಲ್ಲಿ ಬಿಜೆಪಿ ಭಾರಿ ಮುನ್ನಡೆ ಕಾಯ್ದುಕೊಂಡಿರುವುದರಿಂದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನಿವಾಸದ ಮುಂದೆ ಜಮಾಯಿಸಿರುವ ಬಿಜೆಪಿ ಕಾರ್ಯಕರ್ತರು ಜಯಘೋಷ ಮೊಳಗಿಸುತ್ತಿದ್ದಾರೆ.
ಮಧ್ಯ ಪ್ರದೇಶದ ಒಟ್ಟು 230 ಕ್ಷೇತ್ರಗಳ ಪೈಕಿ ಬಿಜೆಪಿ 144 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಪಕ್ಷ ಕೇವಲ 83 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಇಲ್ಲಿ ಮ್ಯಾಜಿಕ್ ನಂಬರ್ 116 ಆಗಿದ್ದು ಈಗಾಗಲೇ ಬಿಜೆಪಿ 144 ಸ್ಥಾನಗಳ ಮುನ್ನಡೆಯಲ್ಲಿದ್ದು, ಸ್ಪಷ್ಟ ಬಹುಮತದತ್ತ ಸಾಗುತ್ತಿದೆ.
ರಾಜಸ್ಥಾನ ರಾಜ್ಯದಲ್ಲಿ ಎಕ್ಸಿಟ್ ಪೋಲ್ ಅಂದಾಜಿನ ಪ್ರಕಾರವೇ ಬಿಜೆಪಿ ಸಾಗುತ್ತಿದ್ದು,199 ಕ್ಷೇತ್ರಗಳ ಪೈಕಿ ಬಿಜೆಪಿ 116 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ಕೇವಲ 67 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇತರರು 16 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ 100 ಮ್ಯಾಜಿಕ್ ನಂಬರ್ ಆಗಿದ್ದು, ಹೀಗಾಗಿ ಇಲ್ಲಿಯೂ ಬಿಜೆಪಿ ಅಧಿಕಾರ ರಚನೆಯತ್ತ ಸಾಗಿದೆ.