ಜೈಪುರ, ಡಿ 02 (DaijiworldNews/AK): ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಳ್ಳುವ ಸುಳಿವನ್ನು ಚುನಾವಣೋತ್ತರ ಸಮೀಕ್ಷೆಗಳು ನೀಡಿದ ಬೆನ್ನಲ್ಲೇ, ಬಿಜೆಪಿ ಮುಖಂಡರು ಸಣ್ಣ ಪಕ್ಷಗಳು ಹಾಗೂ 20 ಮಂದಿ ಪಕ್ಷೇತರ ಅಭ್ಯರ್ಥಿಗಳ ಒಲೈಸಲು ಮುಂದಾಗಿದೆ ಎಂದು ವರದಿಯಾಗಿದೆ.
ಈಗಾಗಲೇ ಪಕ್ಷ ಟಿಕೆಟ್ ನಿರಾಕರಿಸಿದ ಕಾರಣ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದವರ ಮನವೊಲಿಸುವ ಪ್ರಯತ್ನಗಳೂ ನಡೆದಿವೆ. ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆಯಾದ ಸಂದರ್ಭದಲ್ಲಿ ಸಣ್ಣ ಪಕ್ಷಗಳ ಹಾಗೂ ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರ ಗಳಿಸುವ ಯೋಜನೆ ಬಿಜೆಪಿದಾಗಿದೆ.
ಈ ಕುರಿತಂತೆ ಈಗಾಗಲೇ ಬಂಡಾಯ ಅಭ್ಯರ್ಥಿಗಳಾದ ರೋಹಿತೇಶ್ ಶರ್ಮಾ, ಚಂದ್ರಬಾನ್ ಸಿಂಗ್ ಅಖ್ಯಾ ಮತ್ತು ರವೀಂದ್ರ ಅವರನ್ನು ಭೇಟಿ ನೀಡಿ ಚರ್ಚಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಬಿಎಸ್ಪಿ , ಭಾರತೀಯ ಆದಿವಾಸಿ ಪಕ್ಷ, ರಾಷ್ಟ್ರೀಯ ಲೋಕತಂತ್ರ ಪಕ್ಷದ ಜೊತೆ ಮಾತುಕತೆ ಆರಂಭಿಸುವಂತೆ ರಾಜ್ಯದ ಚುನಾವಣಾ ಉಸ್ತುವಾರಿ ಹೊಂದಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಾರೆ ಈ ಮೂರು ಪಕ್ಷಗಳು ಸುಮಾರು 6 ರಿಂದ 10 ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲೆ ಬಿಜೆಪಿ ಈ ತಂತ್ರಗಾರಿಕೆಯನ್ನು ಪ್ರಾರಂಭಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.