ಕೊಡಗು, ಡಿ 01 (DaijiworldNews/AA): ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಕೇಸ್ ನಲ್ಲಿ ಹೆಸರು ಕೇಳಿಬಂದ ವೈದ್ಯರೊಬ್ಬರ ಶವ ಕಾರಿನಲ್ಲಿ ಪತ್ತೆಯಾದ ಘಟನೆ ಕುಶಾಲನಗರದ ಆನೆಕಾಡು ಎಂಬಲ್ಲಿ ನಡೆದಿದೆ.
ಮಂಡ್ಯದ ಶಿವಳ್ಳಿ ನಿವಾಸಿ ಡಾ. ಸತೀಶ್ ಮೃತ ವೈದ್ಯ.
ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣದಲ್ಲಿ ಡಾ. ಸತೀಶ್ ಅವರ ಹೆಸರು ಕೇಳಿಬಂದಿತ್ತು ಎನ್ನಲಾಗಿದೆ. ಈ ಹಿನ್ನೆಲೆ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಇದರಿಂದ ಕಾರಿನಲ್ಲಿಯೇ ಇಂಜೆಕ್ಷನ್ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಂಶಯ ವ್ಯಕ್ತವಾಗಿದೆ.
ಮೈಸೂರಿನ ಹುಣಸೂರು ತಾಲೂಕಿನ ಕೊಣಸೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಡಾ. ಸತೀಶ್ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇವರು ಹಲವು ವರ್ಷಗಳಿಂದ ಶಿವಳ್ಳಿಯಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ಆರೋಗ್ಯ ಸಚಿವರು ಆಲೆಮನೆಗೆ ಭೇಟಿ ನೀಡಿದ ಸಂದರ್ಭ ಡಾ. ಸತೀಶ್ ಅವರನ್ನು ಭೇಟಿ ಮಾಡುವಂತೆ ಸೂಚನೆ ನೀಡಿದ್ದರು. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಕಾರಿನಲ್ಲಿ ಸಿರೆಂಜ್ ಮತ್ತು ಔಷಧಿ ಡಬ್ಬಿ ಪತ್ತೆಯಾಗಿದೆ. ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.