ಬೆಂಗಳೂರು, ಡಿ 01 (DaijiworldNews/AK): ಮುಂದಿನ ಐದು ವರ್ಷಗಳಲ್ಲಿ ಭಾರತದ ದೇಶ, ಕರ್ನಾಟಕ ಏಡ್ಸ್ ಮುಕ್ತ ದೇಶ /ರಾಜ್ಯ ಆಗಲಿ. ಈ ದಿಕ್ಕಿನಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಇದ್ದ ವಿಶ್ವ ಏಡ್ಸ್ ದಿನ 2023 ಮತ್ತು 25 ನೇ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿ,
ಹೆಚ್ ಐ ವಿ ಮುಕ್ತ ಸಮಾಜವಾಗಿಸುವುದು ಎಲ್ಲರ ಜವಾಬ್ದಾರಿ.ಇಂದು ವಿಶ್ವ ಏಡ್ಸ್ ದಿನ. ಈ ಸಾಂಕ್ರಾಮಿಕ ರೋಗವನ್ನು ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ರೋಗ 1986 ರಲ್ಲಿ ಭಾರತದಲ್ಲಿ ಹಾಗೂ 1987 ರಲ್ಲಿ ಕರ್ನಾಟಕದಲ್ಲಿ ಪತ್ತೆಯಾಯಿತು. ಇತ್ತಿಚಿನ ದಿನಗಳಲ್ಲಿ ಹೆಚ್ ಐವಿ ಪೀಡಿತರ ಹಾಗೂ ಅದರ ಹರಡುವಿಕೆಯೂ ಕಡಿಮೆಯಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ನಮ್ಮ ಸಮಾಜವನ್ನು ಹೆಚ್ ಐ ವಿ ಮುಕ್ತ ಸಮಾಜವನ್ನಾಗಿ ಮಾಡಬೇಕು. ಇದಕ್ಕಾಗಿ ಜನರಲ್ಲಿ ಮತ್ತು ಯುವಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಬೇಕು
2015-2020ರವರೆಗೆ ಏಡ್ಸ್ ಪೀಡಿತರ ಸಂಖ್ಯೆಯನ್ನು ಸೊನ್ನೆಗೆ ತನ್ನಿ ಎಂಬ ಘೋಷವಾಕ್ಯವಿತ್ತು. ಆದರೆ ಈ ಗುರಿಯನ್ನು ಇನ್ನೂ ಸಾಧಿಸಲಾಗಿಲ್ಲ. ಈ ಘೋಷಣೆಯನ್ನು ಕಾರ್ಯರೂಪಕ್ಕೆ ತರುವುದು ಕೇವಲ ಆರೋಗ್ಯ ಇಲಾಖೆಯ ಹೊಣೆಯಾಗಿರದೇ, ಇಡೀ ಸಮಾಜದ ಹೊಣೆಯಾಗಿದೆ. ಎಂದರು.
ಈ ಸಾಂಕ್ರಾಮಿಕ ರೋಗ ಪೂರ್ಣ ವಾಸಿಯಾದರೆ ಏಡ್ಸ್ ಪೀಡಿತರು ನೆಮ್ಮದಿಯ ಜೀವನ ನಡೆಸಲು ಸಾಧ್ಯ.ಇನ್ನು ಐದಾರು ವರ್ಷಗಳಲ್ಲಿ ಸೊನ್ನೆಯ ದಿನ ಬರಲಿ ಎಂದು ಹಾರೈಸುತ್ತೇನೆ.ಭಾರತ ಏಡ್ಸ್ ಪ್ರಕರಣಗಳಲ್ಲಿ ವಿಶ್ವದಲ್ಲಿಯೇ 3 ನೇ ಸ್ಥಾನದಲ್ಲಿದೆ. ನಾವು ಹೆಚ್ಚು ಜಾಗೃತರಾಗುವುದು ಅವಶ್ಯ. ಕೆಲವರಿಗೆ ತಪ್ಪು ತಿಳುವಳಿಕೆಗಳಿವೆ. ರೋಗಿಗಳೊಂದಿಗೆ ಮಾತನಾಡಿದರೆ ರೋಗ ಬರುತ್ತದೆ ಎಂದು. ಆದರೆ ಹಾಗಾಗುವುದಿಲ್ಲ. ಹೆಚ್ಚಾಗಿ ರಕ್ತದ ಮೂಲಕವಾಗಿ ಹರಡುತ್ತದೆ. ಇದು ಜನರಿಗೆ ಗೊತ್ತಿರಬೇಕು. ಆಮೇಲೆ ಅನುಭವಿಸುವುದಕ್ಕಿಂತ ಮೊದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.