ತಿರುವನಂತಪುರ, ಡಿ 01 (DaijiworldNews/MR): ಮಲಯಾಳಂ ಹಿರಿಯ ನಟಿ ತಾರಾ ಕಲ್ಯಾಣ್ ಅವರ ತಾಯಿ ಆರ್.ಸುಬ್ಬಲಕ್ಷ್ಮಿ (87) ಗುರುವಾರ ರಾತ್ರಿ ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ವಿವಿಧ ಭಾಷೆಯ ಸಿನಿಮಾಗಳಲ್ಲಿ ಅಜ್ಜಿ ಪಾತ್ರಗಳನ್ನು ನಿರ್ವಹಿಸಿ ಹೆಸರುವಾಸಿಯಾಗಿದ್ದರು. ಸುಬ್ಬಲಕ್ಷ್ಮಿ ಅವರು ಕೇವಲ ನಟಿಯಾಗಿರಲಿಲ್ಲ. ಅವರು ಸಂಗೀತದಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಚಿತ್ರಕಲಾವಿದರಾಗಿದ್ದರು. ಮಲಯಾಳಂನಲ್ಲಿ ಅವರ ಕೆಲವು ಪ್ರಸಿದ್ಧ ಸಿನಿಮಾಗಳಾದ ‘ಕಲ್ಯಾಣರಾಮನ್’, ‘ಪಾಂಡಿಪ್ಪಾ’ ಮತ್ತು ‘ನಂದನಂ’ ನಂತಹ ಚಿತ್ರಗಳಲ್ಲಿ ಅಭಿನಯಿಸಿದ್ದರು.
ಮಲಯಾಳಂ ಮಾತ್ರವಲ್ಲದೆ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಸಂಸ್ಕೃತ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ‘ಇನ್ ದಿ ನೇಮ್ ಆಫ್ ಗಾಡ್’ ಎಂಬ ಇಂಗ್ಲಿಷ್ ಚಿತ್ರದಲ್ಲೂ ಅವರು ಪಾತ್ರ ನಿರ್ವಹಿಸಿದ್ದಾರೆ. ಹಲವಾರು ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.
ತಮಿಳಿನಲ್ಲಿ, ದಳಪತಿ ವಿಜಯ್ ಅವರ ‘ಬೀಸ್ಟ್’ ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಆರ್.ಸುಬ್ಬಲಕ್ಷ್ಮಿ ಅವರು. ಹಿಂದಿಯಲ್ಲಿ ‘ದಿಲ್ ಬೆಚಾರ’ ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಅಜ್ಜಿಯಾಗಿ ನಟಿಸಿದ್ದರು. ಸುಬ್ಬಲಕ್ಷ್ಮಿ ಅವರು ದಕ್ಷಿಣ ಭಾರತದಲ್ಲಿ ಆಕಾಶವಾಣಿಯ ಮೊದಲ ಮಹಿಳಾ ಸಂಯೋಜಕಿ ಆಗಿದ್ದರು. ಡಬ್ಬಿಂಗ್ ಕಲಾವಿದೆಯಾಗಿಯೂ ಕೆಲಸ ಮಾಡಿದ್ದರು. 65ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಆರ್.ಸುಬ್ಬಲಕ್ಷ್ಮಿ ಅವರು ಕಾಣಿಸಿಕೊಂಡಿದ್ದರು.