ಹಾಸನ, ನ 30 (DaijiworldNews/MR): ನನ್ನ ಕ್ಷೇತ್ರದಲ್ಲಿ 224 ಶಾಲೆಗಳಲ್ಲಿ ಶೌಚಾಲಯವಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಇನ್ನು ಶೌಚಾಲಯವಿದ್ದರೂ ಶಿಕ್ಷಕರೇ ಸ್ವಚ್ಛ ಮಾಡುವ ಪರಿಸ್ಥಿತಿ ಬಂದಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಸಚಿವರು ಬಂದು ಕಾಂಗ್ರೆಸ್ ಕಚೇರಿಗೆ ಭೇಟಿ ಕೊಟ್ಟರು. ಜಿಲ್ಲಾ ಪಂಚಾಯತ್ ನಲ್ಲಿ ಕೇಸರಿಬಾತ್, ಉಪ್ಪಿಟ್ಟು ತಿಂದು ಹೋದರು. ಆದರೆ ಶೌಚಾಲಯ ತೊಳೆಯುವ ಶಿಕ್ಷಕರ ಸ್ಥಿತಿ ಏನಾಗಬೇಕು. ಇಂಥ ಪರಿಸ್ಥಿತಿ ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದ ಮಧು ಬಂಗಾರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದ ರೇವಣ್ಣ, ಅವರು ಕುಮಾರಣ್ಣ ಅವರೊಂದಿಗೆ ವ್ಯಾಪಾರ ಮಾಡಿಕೊಂಡು ಬಂದವರು, 2009 ರಲ್ಲಿ ಅವರ ಪಕ್ಷದವರು ಏಕೆ ನಮ್ಮ ಪಕ್ಷಕ್ಕೆ ಬಂದರು ಎಂದು ಟೀಕಿಸಿದರು.
ಇನ್ನೂ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ದುಡ್ಡಿನಿಂದ ತೆಲಂಗಾಣದಲ್ಲಿ ಚುನಾವಣೆ ಮಾಡಲಾಗುತ್ತಿದೆ. ಗೃಹಲಕ್ಷ್ಮಿ ಆಸೆ ತೋರಿಸಿ ರಾಜ್ಯ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.