ರಾಂಚಿ, ನ 30 (DaijiworldNews/MR): ಉತ್ತರಾಖಂಡದಲ್ಲಿ ನಿರ್ಮಾಣ ಹಂತದಲ್ಲಿರುವ ಸಿಲ್ಮಾರಾ ಸುರಂಗದ ಮಾರ್ಗದಲ್ಲಿ ಸಿಲುಕಿದ್ದ 41 ಕಾರ್ಮಿಕರಲ್ಲಿ, ಒಬ್ಬ ಕಾರ್ಮಿಕರ ತಂದೆ ದುರದೃಷ್ಟವಶಾತ್ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳ್ಳುವ ಕೆಲವೇ ಗಂಟೆಗಳ ಮೊದಲು ಕೊನೆಯುಸಿರೆಳೆದಿದ್ದಾರೆ.
ನವೆಂಬರ್ 12 ರಂದು ಸುರಂಗ ಕುಸಿತದ ಸುದ್ದಿಯ ನಂತರ, 28 ವರ್ಷದ ಕಾರ್ಮಿಕ ಭಕ್ತು ತನ್ನ ತಂದೆ ಬಸೆತ್ ಅಲಿಯಾಸ್ ಬಾರ್ಸಾ ಮುರ್ಮು (70) ಅವರನ್ನು ಕಳೆದುಕೊಂಡಿದ್ದಾನೆ. ತಮ್ಮ ಮಗನ ಬಗ್ಗೆ ತುಂಬಾ ಚಿಂತಿತರಾಗಿದ್ದರು ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.
ಜಾರ್ಖಂಡ್ ರಾಜ್ಯದ ಸಿಂಫ್ ಭುಮ್ ಜಿಲ್ಲೆಯ ಬಹಾರ್ ಗ್ರಾಮದ ನಿವಾಸಿ ಮುರ್ಮು ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ಮಗ ಭಕ್ತು ಸುರಂಗದಿಂದ ಹೊರಗೆ ಬರಲು ಇನ್ನೂ 12 ಗಂಟೆ ಬಾಕಿ ಇರುವಾಗ, ಅವರ ತಂದೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಮುರ್ಮು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿತ್ತು, ಆದರೆ ಅವರ ಸಾವಿಗೆ ನಿಖರವಾದ ಕಾರಣವನ್ನು ಇನ್ನೂ ದೃಢಪಡಿಸಲಾಗಿಲ್ಲ.