ವಾಯನಾಡ್,ಏ17(Daijiworld News/AZM): ಕೇರಳದ ವಾಯನಾಡಿನ ಪ್ರಖ್ಯಾತ ವಿಷ್ಣು ಕ್ಷೇತ್ರಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಇಂದು ಭೇಟಿ ನೀಡಿ ಕುಟುಂಬದಲ್ಲಿ ತೀರಿಕೊಂಡವರಿಗೆ ಹಾಗೂ ಪುಲ್ವಾಮಾ ದಾಳಿ ಸಂತ್ರಸ್ತರಿಗೆ ಕಾರ್ಯವನ್ನು ನೆರವೇರಿಸಿದ್ದಾರೆ.
ಪುರೋಹಿತರ ನಿರ್ದೇಶನದ ಮೇರೆಗೆ ರಾಹುಲ್ ಗಾಂಧಿ ಅವರು ತಮ್ಮ ಅಜ್ಜಿ ಇಂದಿರಾ ಗಾಂಧಿ, ತಂದೆ ರಾಜೀವ್ ಗಾಂಧಿ, ಹಿರಿಯರು ಹಾಗೂ ಪುಲ್ವಾಮಾ ದಾಳಿ ಸಂತ್ರಸ್ತರಿಗೆ ಕಾರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಅವರು ಪಂಚೆ ಉಟ್ಟು, ಅಂಗವಸ್ತ್ರ ಹೊಂದಿದ್ದು, ದೇವಸ್ಥಾನದ ಅತಿಥಿ ಗೃಹದಿಂದ ದೇವಳದವರೆಗೂ ನಡೆದುಕೊಂಡು ಬಂದಿದ್ದಾರೆ. ದೇವಾಲಯದ ಪುರೋಹಿತರು ಹೇಳಿದ ಪ್ರತಿ ಅಂಶವನ್ನು ಗ್ರಹಿಸಿದ ರಾಹುಲ್ ಗಾಂಧಿ ದೇವರ ದರ್ಶನ ಮಾಡಿದರು. ಅದಾದ ಮೇಲೆ ತಮ್ಮ ತಂದೆಯ ಅಸ್ಥಿ ವಿಸರ್ಜನೆ ಮಾಡಿದ ಸ್ಥಳಕ್ಕೆ ಪುರೋಹಿತರ ಜತೆಗೆ ಏಳು ನೂರು ಮೀಟರ್ ನಡೆದುಕೊಂಡು ಹೋಗಿದ್ದಾರೆ.
ಇನ್ನು ಈ ಸ್ಥಳಕ್ಕೂ ರಾಹುಲ್ ಗಾಂಧಿ ಕುಟುಂಬಕ್ಕೂ ಒಂದು ನಂಟಿದೆ. ರಾಹುಲ್ ಗಾಂಧಿ ಅವರ ತಂದೆ, ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅಸ್ಥಿ ವಿಸರ್ಜನೆಯನ್ನು ಇಲ್ಲಿ ಮಾಡಲಾಗಿದೆ. ಇಪ್ಪತ್ತೆಂಟು ವರ್ಷದ ಹಿಂದೆ ರಾಜೀವ್ ಗಾಂಧಿ ಅವರ ಅಸ್ಥಿಯನ್ನು ತಿರುನೆಲ್ಲಿಯ ವಿಷ್ಣುವಿನ ದೇವಸ್ಥಾನದಲ್ಲಿ ಇರುವ ಪಾಪನಾಶಿನಿಯಲ್ಲಿ ವಿಸರ್ಜಿಸಲಾಗಿತ್ತು. ವಯನಾಡು ಎಂಬುದು ಒಂದು ಲೋಕಸಭಾ ಕ್ಷೇತ್ರ ಮಾತ್ರವಲ್ಲ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ತಂದೆಗೆ ಸಂಬಂಧಪಟ್ಟಂತೆ ಆಳವಾದ ಹಾಗೂ ಅರ್ಥಪೂರ್ಣವಾದ ಸಂಬಂಧವೊಂದು ಇದೆ ಎಂದು ರಾಹುಲ್ ಗಾಂಧಿ ಅವರ ಕಚೇರಿಯಿಂದ ಟ್ವೀಟ್ ಮಾಡಲಾಗಿದೆ.