ಹೈದರಾಬಾದ್, ನ 28 (DaijiworldNews/RA): ಭಾರತದಲ್ಲಿ ದ್ವೇಷ ವ್ಯಾಪಕವಾಗಿ ಹರಡಲು ಪ್ರಧಾನಿ ಮೋದಿ ಹಾಗೂ ಕೆಲವರು ಕಾರಣವಾಗಿದ್ದು, ದೇಶದಲ್ಲಿ ಮೋದಿಯನ್ನು ಸೋಲಿಸಿ ದ್ವೇಷ ಕೊನೆಗಾಣಿಸುವುದೇ ನನ್ನ ಪರಮ ಗುರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ತೆಲಂಗಾಣದ ನಾಂಪಪಲ್ಲಿಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ಧೇಶಿಸಿ ಮಾತನಾಡಿರುವ ಅವರು, ನರೇಂದ್ರ ಮೋದಿ ಅವರನ್ನು ಸೋಲಿಸುವುದು ನನ್ನ ಪರಮ ಗುರಿ. ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಸಂಸತ್ ಸದಸ್ಯತ್ಯವನ್ನು ಅನರ್ಹಗೊಳಿಸಲಾಯಿತು, ನನ್ನ ಮನೆಯನ್ನು ಕಸಿದುಕೊಳ್ಳಲಾಯಿತು. ಆದರೆ ನಾನು ದೇಶದ ಕೋಟ್ಯಂತರ ಜನರ ಮನಸ್ಸಿನಲ್ಲಿ ನೆಲೆಸಿದ್ದೇನೆ. ಸೈದ್ಧಾಂತಿಕವಾಗಿ ಹೋರಾಡುತ್ತಿದ್ದು, ಇದರಲ್ಲಿ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ ಎಂದಿದ್ದಾರೆ.
ಇನ್ನು ದೇಶದಲ್ಲಿ ಕಾಂಗ್ರೆಸ್ ಪಕ್ಷ ಭಾರತ್ ಜೋಡೋ ಯಾತ್ರೆ ನಡೆಸಿದ ಸಂದರ್ಭ ನಫ್ರತ್ ಕಾ ಬಜಾರ್ನಲ್ಲಿ ಮೊಹಬ್ಬತ್ ಕಿ ದುಕಾನ್ ತೆರೆಯುವುದಾಗಿ ಘೋಷಿಸಿತ್ತು. ನಾನು ಮೋದಿ ವಿರುದ್ಧ ಹೋರಾಟ ಆರಂಭ ಮಾಡಿದ ನಂತರ ದೇಶಾದ್ಯಂತ ನನ್ನ ವಿರುದ್ಧ 24 ಪ್ರಕರಣಗಳು ದಾಖಲಾದವು. ಕಾಲಕಾಲಕ್ಕೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯದಿಂದ ಸಮನ್ಸ್ ಜಾರಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಮೋದಿ ಸೋಲುವುದನ್ನು ಖಚಿತಪಡಿಸಬೇಕೆಂದರೆ ಮೊದಲಿಗೆ ನಾವು ತೆಲಂಗಾಣದಲ್ಲಿ ಬಿಆರ್ಎಸ್ ದುರಾಡಳಿತವನ್ನು ಕೊನೆ ಮಾಡಬೇಕು ಎಂದಿದ್ದಾರೆ.
ತೆಲಂಗಾಣ ವಿಧಾನಸಭೆಗೆ ನವೆಂಬರ್ 30ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.