ಹುಬ್ಬಳ್ಳಿ, ಏ 17(Daijiworld News/MSP): ಈಗೇನಿದ್ದರೂ ದೇಶದೆಲ್ಲೆಡೆ ಚುನಾವಣೆಯ ಹವಾ, ಎಲ್ಲೆಲ್ಲೂ ಲೋಕಸಭಾ ಕದನ ರಾಜಕಾರಣಿಗಳ ಮಾತಿನ ಸಮರ. ಹೀಗಾಗಿ ಹುಬ್ಬಳ್ಳಿಯ ವ್ಯಕ್ತಿಯೊರೊಬ್ಬರು ತಮ್ಮ ಮಗಳ ಮದುವೆಯ ಪಾರ್ಟಿ ಕಾರ್ಡ್ ನ್ನು ಮತದಾರರ ಗುರುತಿನ ಚೀಟಿಯಂತೆಯೇ (ಎಪಿಕ್ ಕಾರ್ಡ್) ಮುದ್ರಿಸಿ ಗಮನ ಸೆಳೆದಿದ್ದಾರೆ. ಇದೀಗ ‘ಹೂಗಾರ ಬಂಧುಗಳ ಮದುವೆ ಸಮಾರಂಭ’ದ ಆಮಂತ್ರಣ ಪತ್ರಿಕೆ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
ಹುಬ್ಬಳಿಯ ಶಂಕರಲಿಂಗ ಬಡಾವಣೆಯ ಸುಮಂಗಲಾ ಈರಪ್ಪ ಹೂಗಾರ ಅವರು ತಮ್ಮ ಮಗಳು ಅನ್ನಪೂರ್ಣ ಹೂಗಾರ ಅವರ ಮದುವೆಯ ಪಾರ್ಟಿ ಕಾರ್ಡ್ ನ್ನು ಎಪಿಕ್ ಕಾರ್ಡ್ನಂತೆ ಮುದ್ರಿಸುವ ಮೂಲಕ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನು ಈ ಕಾರ್ಡ್ನ ಹಿಂಭಾಗದಲ್ಲಿ ‘ಜೀವ ಉಳಿಸಲು ರಕ್ತದಾನ, ದೇಶ ಕಟ್ಟಲು ಮತದಾನ. ಮದುವೆಗೆ ತಪ್ಪದೇ ಬನ್ನಿ, ಮತದಾನ ಕಡ್ಡಾಯವಾಗಿ ಮಾಡಿ’ ಎನ್ನುವ ಸಂದೇಶ ಬರೆಯಲಾಗಿದೆ. ಭಾವಚಿತ್ರದ ಜಾಗದಲ್ಲಿ ವಿವಾಹವಾಗುವರ ಭಾವಚಿತ್ರ ಹಾಕಲಾಗಿದೆ.