ಕೊಚ್ಚಿ, ಏ 17(Daijiworld News/MSP):: ಅಮೇಥಿ ಹಾಗೂ ಕೇರಳದ ವಯನಾಡ್ ನಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ವಯನಾಡಿನಲ್ಲಿ ಮತಬೇಟೆ ಆರಂಭಿಸಿದ್ದು ಇದರ ಮೊದಲ ಅಧ್ಯಾಯವಾಗಿ ಟೆಂಪಲ್ ರನ್ ಆರಂಭಿಸಿದ್ದಾರೆ.
ಮೊದಲ ಬಾರಿಗೆ ದಕ್ಷಿಣ ಭಾರತದಿಂದ ಸ್ಪರ್ಧೆ ಮಾಡಿರುವ ರಾಹುಲ್ ಗಾಂಧಿ ಕೇರಳದ ತಿರುನೇಲಿ ದೇಗುಲಕ್ಕೆ ಭೇಟಿ ನೀಡಿ ಹಲವು ವಿಧದ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾದರು. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದಿಕೊಂಡಿರುವ ರಾಹುಲ್, ದೇವಸ್ಥಾನ ಸುಂದರವಾಗಿದ್ದು ಶಾಂತಿ ಹಾಗೂ ಪ್ರಶಾಂತತೆಯಿಂದ ಕೂಡಿದೆ. 1991 ರಲ್ಲಿ ನನ್ನ ತಂದೆಯ ಚಿತಾಭಸ್ಮವನ್ನು ಹಿಡಿದು ಪಾಪನಾಶಿನಿಯಲ್ಲಿ ಮುಳುಗಿದ ಹಳೆಯ ನೆನಪು ಮರುಕಳಿಸಿತು ಎಂದು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ
ರಾಹುಲ್ ಗಾಂಧಿ ದೇಗುಲ ಅರ್ಚಕರ ಸೂಚನೆಯಂತೆ ಬಿಳಿ ಪಂಚೆ ಮತ್ತು ಧೋತಿ ಧರಿಸಿದ್ದು ತಮ್ಮ ಪೂರ್ವಜರಿಗೆ, ತಂದೆ ರಾಜೀವ್ ಗಾಂಧಿ ಅವರಿಗೆ ಮತ್ತು ಅಜ್ಜಿ ಇಂದಿರಾಗಾಂಧಿ ಅವರಿಗೆ ಪೂಜೆ ಸಲ್ಲಿಸಿದರು. ಇದಲ್ಲದೆ ಪುಲ್ವಾಮ ಉಗ್ರ ದಾಳಿಯಲ್ಲಿ ಸಾವನ್ನಪ್ಪಿದ ಯೋಧರಿಗೂ ರಾಹುಲ್ ಗಾಂಧಿ ಪೂಜೆ ಸಲ್ಲಿಕೆ ಮಾಡಿದ್ದು ವಿಶೇಷವಾಗಿತ್ತು.