ಹೊಸದಿಲ್ಲಿ, ಎ17(Daijiworld News/SS): ನ.8, 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಘೋಷಿಸಿದ 500/1000 ರೂ. ಮುಖಬೆಲೆಯ ನೋಟುಗಳ ನಿಷೇಧ ಕ್ರಮದಿಂದ ಬರೋಬ್ಬರಿ 50 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಅಧ್ಯಯನದ ಮೂಲಕ ಬಯಲಾಗಿದೆ.
2016ರಲ್ಲಿ ದೇಶದಲ್ಲಿ ಚಲಾವಣೆಯಲ್ಲಿದ್ದ ಶೇ.80ರಷ್ಟು ನೋಟುಗಳು ಮೌಲ್ಯ ಕಳೆದುಕೊಂಡವು. ಕಪ್ಪು ಹಣ, ನಕಲಿ ನೋಟು, ಕಾಶ್ಮೀರದಲ್ಲಿ ಕಲ್ಲು ತೂರಾಟ ವಿರುದ್ಧ ನೋಟು ನಿಷೇಧ ನಿರ್ಧಾರ ಕೈಗೊಂಡಿದ್ದಾಗಿ ಎನ್ಡಿಎ ಸರಕಾರ ಸಮರ್ಥನೆ ನೀಡಿತ್ತು. ಆದರೆ ನಿಷೇಧಗೊಂಡಿದ್ದ ನೋಟುಗಳ ಪೈಕಿ ಶೇ.99.3ರಷ್ಟು ನೋಟುಗಳು ಆರ್ಬಿಐಗೆ ಮರಳಿದ್ದವು.
ಈ ಬೆನ್ನಲ್ಲೇ ನೋಟು ನಿಷೇಧ ಕ್ರಮ ಸಂಪೂರ್ಣ ವಿಫಲವಾಗಿದೆ ಎಂದು ವಿತ್ತ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದೀಗ ನೋಟು ನಿಷೇಧ ಕ್ರಮದಿಂದ 50 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. 2018ರಲ್ಲಿ ಭಾರತದ ನಿರುದ್ಯೋಗ ಪ್ರಮಾಣ ಶೇ.6ಕ್ಕೆ ಹೆಚ್ಚುವ ಮೂಲಕ ಗರಿಷ್ಠ ಪ್ರಮಾಣವನ್ನು ತಲುಪಿದೆ. ಇದು 2000 ಮತ್ತು 2010ರ ನಡುವಣ ಅವಧಿಯ ಎರಡು ಪಟ್ಟು ಹೆಚ್ಚಿನ ಪ್ರಮಾಣವಾಗಿದೆ ಎಂದು ಸೆಂಟರ್ ಫಾರ್ ಸಸ್ಟೈನೇಬಲ್ ಎಂಪ್ಲಾಯ್ಮೆಂಟ್ ಅಜೀಮ್ ಪ್ರೇಮ್ಜೀ ಯೂನಿವರ್ಸಿಟಿಯ ಸಂಶೋಧಕರ 'ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ' ವರದಿಯಲ್ಲಿ ತಿಳಿಸಿದೆ.
ನಿರೋದ್ಯಗಿಗಳ ಪೈಕಿ 20-24 ವರ್ಷದ ಯುವಕರೇ ಹೆಚ್ಚು ಎಂದು ಅಜೀಮ್ ಪ್ರೇಮ್ಜಿ ಯೂನಿವರ್ಸಿಟಿ ಸಂಶೋಧಕರು ಬಿಡುಗಡೆ ಮಾಡಿರುವ ವರದಿಯಲ್ಲಿದೆ.