ತುಮಕೂರು, ನ 26(DaijiworldNews/PC): ಮಾಜಿ ಸಚಿವ ವಿ. ಸೋಮಣ್ಣ ಅವರು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡಿದ್ದಾರೆ. ಇವಿಷ್ಟೇ ಅಲ್ಲದೇ ಈಗ ತಮ್ಮ ಆಕ್ರೋಶವನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವ್ಯಕ್ತಪಡಿಸಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗ ಸ್ವಾಮೀಜಿಗಳನ್ನು ಶನಿವಾರ ಭೇಟಿ ಮಾಡಿ ಆಶೀರ್ವಾದ ಪಡೆದ ಸಂದರ್ಭದಲ್ಲಿ ತಮ್ಮ ಬೇಸರ, ನೋವು ವ್ಯಕ್ತಪಡಿಸಿದ ಅವರು ಕೇಂದ್ರ ಸಚಿವ ಅಮಿತ್ ಶಾ ಬಂದು ಮನೆಯಲ್ಲಿ ಕುಳಿತುಕೊಂಡು ಜೀವ ತೆಗೆದರು. ಎರಡು ತಾಸು ಮನೆಯಲ್ಲಿ ಕುಳಿತುಕೊಂಡಿದ್ದರು. ಏನೂ ಮಾಡಲಾಗಲಿಲ್ಲ. ಪ್ರಧಾನಿ ಮೋದಿಯವರು ದೆಹಲಿಗೆ ಕರೆಸಿಕೊಂಡು ನಾಲ್ಕು ದಿನ ಇರಿಸಿಕೊಂಡು ನೀನು ಚುನಾವಣೆಗೆ ನಿಂತುಕೊ ಅಂದರು. ಹೀಗಾಗಿ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು ಎಂದು ಬೇಸರದ ಮಾತುಗಳನ್ನಾಡಿದ್ದಾರೆ.
ಎರಡು ಕಡೆ ಸ್ಪರ್ಧೆ ಮಾಡಿದ್ದಕ್ಕೆ ನನಗೆ ಬೇಸರವಾಗಿದೆ. ಸ್ವಕ್ಷೇತ್ರ ಬಿಟ್ಟು ಬೇರೆ ಕಡೆ ಸ್ಪರ್ಧಿಸಿ ಮಹಾ ಅಪರಾಧವಾಗಿದೆ ಎಂದು ತಮ್ಮ ನೋವು ವ್ಯಕ್ತಪಡಿಸಿದರು. ಮೇ ತಿಂಗಳಿನಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಸೋಮಣ್ಣ ಚಾಮರಾಜನಗರ ಮತ್ತು ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.
ರಾಜ್ಯ ಬಿಜೆಪಿಯ ಬೆಳವಣಿಗೆಯಿಂದ ಬೇಸತ್ತಿರುವ ಸೋಮಣ್ಣ ಡಿ. 6ರ ಬಳಿಕ ದೆಹಲಿ ತೆರಳಲು ತೀರ್ಮಾನಿಸಿದ್ದಾರೆ. ಡಿ. 7, 8 ಮತ್ತು 9ರಂದು ಪಕ್ಷದ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ ಅವರೊಂದಿಗೆ ತೆರಳುವುದಾಗಿ ಹೇಳಿದರು.