ಬೆಂಗಳೂರು,ನ 25 (DaijiworldNews/AK) : ಸಿಲಿಕಾನ್ ಸಿಟಿಯಲ್ಲಿ ಕರಾವಳಿ ಭಾಗದ ಗ್ರಾಮೀಣ ಕ್ರೀಡೆ ಕಂಬಳಕ್ಕೆ ಗಣ್ಯರಿಂದ ಅದ್ಧೂರಿ ಚಾಲನೆ ಸಿಕ್ಕಿದೆ. ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಂಬಳಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ , ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ , ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಗಣ್ಯರು ಚಾಲನೆ ನೀಡಿದರು.
ಸಂಸದ ಸದಾನಂದಗೌಡ, ಪಿ.ಸಿ ಮೋಹನ್, ಯಲಹಂಕ ಕ್ಷೇತ್ರದ ಶಾಸಕ ವಿಶ್ವನಾಥ್, ಗಾಯಕ ಗುರುಕಿರಣ್, ಕಂಬಳ ಸಮಿತಿ ಅಧ್ಯಕ್ಷ ಶಾಸಕ ಅಶೋಕ್ ರೈ ಹಾಗೂ ಬೆಂಗಳೂರು ಕಂಬಳ ಸಮಿತಿ ಸಂಘಟನಾ ಅಧ್ಯಕ್ಷ ಉಮೇಶ್ ಶೆಟ್ಟಿ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಭಾಗಿಯಾಗಿದ್ದಾರೆ.ಅಶ್ವಿನಿ ಪುನೀತ್ ರಾಜಕುಮಾರ್ ಅವರು ಗಂಗಾರತಿ ಮಾಡುವ ಮೂಲಕ 155 ಮೀಟರ್ ಅತೀ ಉದ್ದದ ಕಂಬಳ ಕೆರೆ ಚಾಲನೆ ನೀಡಿದ್ದಾರೆ. ಎರಡು ದಿನಗಳ ಕಾಲ ನಗರದಲ್ಲಿ ಕಂಬಳದ ಕಂಪು ಮೊಳಗಲಿದೆ. ಈಗಾಗಲೇ ಕಂಬಳದ ಕೋಣಗಳಿಗೆಗ ಸಿಲಿಕಾನ್ ಸಿಟಿಗೆ ಕಾಲಿಟ್ಟಿದ್ದು ಈ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂಗಳೂರು ಸಾಂಸ್ಕೃತಿಕ ಕ್ರೀಡೆಗೆ ಸಾಕ್ಷಿಯಾಗುತ್ತಿದೆ.
ಕಡಲತೀರದ ಜನರಿಗಷ್ಟೇ ಸೀಮಿತವಾಗಿದ್ದ ಈ ಕ್ರೀಡೆ ಪ್ರಥಮ ಬಾರಿಗೆ ಬೆಂಗಳೂರು ನಿವಾಸಿಗಳಿಗೂ ಪರಿಚಯಿಸಲಾಗುತ್ತಿದೆ. ಸದ್ಯ 200 ಜೋಡಿ ಕೋಣಗಳು ಓಟದ ರಂಗು ಬೀರಲು ಸಿದ್ಧವಾಗಿವೆ.ಕಂಬಳದ ಸಂಭ್ರಮದ ನಡುವೆ ಕೆಲವು ಸಾಧಕರಿಗೆ ಸನ್ಮಾನ ಮಾಡಲಾಗುತ್ತದೆ. ಇಡೀ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳ ಕಲರವವೂ ರಂಗೇರಲಿದೆ. ಮಿಂಚಿನ ಓಟದಲ್ಲಿ ಓಡಿ ಪ್ರಶಸ್ತಿ ಮುಡಿಗೇರಿಸಲು 200 ಜೋಡಿ ಕೋಣಗಳು ಸಜ್ಜಾಗಿವೆ.
ಅರಮನೆ ಮೈದಾನದ ಗೇಟ್ ನಂಬರ್ 1, 2, 3 ಹಾಗೂ 4ರಲ್ಲಿ ಸಾರ್ವಜನಿಕರಿಗೆ ಎಂಟ್ರಿ ಇರಲಿದೆ. ಮುಖ್ಯವಾಗಿ ಪ್ರವೇಶ ಉಚಿತವಾಗಿರಲಿದೆ. ಯಾವುದೇ ಟಿಕೆಟ್ ಇಲ್ಲದೆ ಉಚಿತವಾಗಿ ಪ್ರವೇಶ ಮಾಡಬಹುದು. ಸಾರ್ವಜನಿಕರು ಯಾವುದೇ ಪಾಸ್ ತೋರಿಸುವ ಅಗತ್ಯವೂ ಇಲ್ಲ.ಆದರೆ ಕಂಬಳ ವೀಕ್ಷಿಸಲು ವಿವಿಐಪಿಗಳಿಗೆ ಫನ್ ವರ್ಲ್ಡ್ ಕಡೆಯಿಂದ ಪ್ರತ್ಯೇಕ ಎಂಟ್ರಿ ವ್ಯವಸ್ಥೆ ಮಾಡಲಾಗಿದೆ. ಪ್ರತ್ಯೇಕ ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಂಬಳವನ್ನು ನೋಡಲು ಜನರಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. 6 ರಿಂದ 7 ಸಾವಿರ ಜನರು ಗ್ಯಾಲರಿಯಲ್ಲಿ ಕುಳಿತುಕೊಂಡು ಕಂಬಳ ನೋಡಬಹುದು.
ಕಂಬಳದ ಜೊತೆಗೆ ಸಾಂಸ್ಕೃತಿಕ ವೈಭವ ಕಣ್ತುಂಬಿಕೊಳ್ಳುವ ಅವಕಾಶವೂ ಸಿಕ್ಕಿದೆ. ಸಾಂಸ್ಕೃತಿಕ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಲಾಗಿದ್ದು, ಕಂಬಳದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರಗು ನೀಡಲಿದೆ. ಕರಾವಳಿಯ ಸಾಂಪ್ರದಾಯಿಕ ಹುಲಿ ಕುಣಿತ, ಜನಪದ ಕುಣಿತ ಕಂಗೀಲು, ಕಂರ್ಗೋಲು, ಮಾಂಕಾಳಿ ಕುಣಿತ ಸೇರಿದಂತೆ ಅಪರೂಪದ ಕುಣಿತಗಳಿಗೂ ಗಮನ ಸೆಳೆಯಲಿದೆ.
ಕಂಬಳದ ವೇಳೆ ಪ್ರಾಣಿ ರಕ್ಷಣಾ ಕಾಯ್ದೆಯನ್ನು ಅನುಸರಿಸಲಾಗುತ್ತದೆ. ಕೋಣಗಳಿಗೆ ಆಹಾರ ಮತ್ತು ಕುಡಿಯುವ ನೀರು ಕಲ್ಪಿಸುವ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ. ಕೋಣಗಳ ಆರೋಗ್ಯ ದೃಷ್ಟಿಯಿಂದ ಬೈಹುಲ್ಲು, ನೀರನ್ನು ಕೂಡ ಕರಾವಳಿಯಿಂದಲೇ ತರಿಸಲಾಗಿದೆ.ಕಂಬಳದ ಸ್ಥಳಕ್ಕೆ ಪಶುವೈದ್ಯರು, ನಾಟಿ ವೈದ್ಯರೂ ಸಹ ಸ್ಥಳದಲ್ಲಿದ್ದಾರೆ. ಗೆದ್ದ ಕೋಣಗಳಿಗೆ ಪ್ರಥಮ ಬಹುಮಾನ 16 ಗ್ರಾಂ ಚಿನ್ನ ಹಾಗೂ 1 ಲಕ್ಷ ನಗದು, 2ನೇ ಬಹುಮಾನ 8 ಗ್ರಾಂ ಚಿನ್ನ ಹಾಗೂ 50,000 ನಗದು, 3ನೇ ಬಹುಮಾನ 4 ಗ್ರಾಂ ಚಿನ್ನ ಹಾಗೂ 25,000 ನಗದು ಸಿಗಲಿದೆ.