ಪತನಂತಿಟ್ಟ, ಎ17(Daijiworld News/SS): ಆರೆಸ್ಸೆಸ್ ಮತ್ತು ಬಿಜೆಪಿಯು ಜಾತಿ, ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಚುನಾವಣಾ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಆರೆಸ್ಸೆಸ್ ಮತ್ತು ಬಿಜೆಪಿಯು ಜಾತಿ, ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯುತ್ತಿದೆ. ನಿಮ್ಮ ಸಿದ್ಧಾಂತ ಒಪ್ಪದ ಕಾಂಗ್ರೆಸ್ ಮೇಲೆ ನೀವು ಎಷ್ಟೇ ದಾಳಿ ನಡೆಸಿದರೂ ನಾವು ಎದೆಗುಂದುವುದಿಲ್ಲ. ಪ್ರೀತಿ ವಿಶ್ವಾಸದಿಂದಲೇ ನಿಮ್ಮ ತಪ್ಪುನ್ನು ತಿದ್ದುತ್ತೇವೆ. ಶಾಂತಿಗೆ ಧಕ್ಕೆ ತರದ ರೀತಿಯಲ್ಲಿ ಯಾವುದೇ ವಿಷಯದ ಬಗ್ಗೆ ತಮ್ಮ ಮನದಾಳದ ಭಾವನೆಗಳನ್ನು ಹೊರಹಾಕಲು ಜನರು ಎಲ್ಲ ರೀತಿಯಿಂದಲೂ ಸ್ವತಂತ್ರರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಸದಾ ಗೌರವಿಸುತ್ತದೆ ಎಂದು ಹೇಳಿದರು.
ಭಾರತೀಯ ಸೇನೆಯನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳಿನ ಭರವಸೆಗಳ ಸರದಾರ. ಕಳೆದ ಐದು ವರ್ಷದಲ್ಲಿ ಒಂದು ಭರವಸೆಯನ್ನೂ ಅವರ ಸರಕಾರ ಈಡೇರಿಸಿಲ್ಲ ಎಂದು ದೂರಿದರು.
ಕೇಂದ್ರದಲ್ಲಿರುವ ಮೋದಿ ಸರಕಾರ ಜನರ ಕಾಳಜಿ ಹೊಂದಿಲ್ಲ. ಕಳೆದ ಐದು ವರ್ಷಗಳಲ್ಲಿ ಅವರ ಸರಕಾರ ಉದ್ಯಮಿಗಳ ಪರವಾಗಿಯೇ ನಿಂತಿದೆ. ಮೋದಿ ಅವರು ಜನರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮೆ ಮಾಡುವುದಾಗಿ 2014ರ ಚುನಾವಣೆಯಲ್ಲಿ ಭರವಸೆ ನೀಡಿದ್ದರು. ಎರಡು ಕೋಟಿ ಉದ್ಯೋಗ ಸ್ಟಷ್ಟಿಸುವುದಾಗಿ ಹೇಳಿದ್ದರು. ಅದ್ಯಾವುದನ್ನೂ ಈಡೇರಿಸಿಲ್ಲ ಎಂದು ಟೀಕೆ ಮಾಡಿದರು.