ನವದೆಹಲಿ, ಏ 17(Daijiworld News/MSP): ದೇಶದ ಯುವ ಜನರನ್ನು ಅತಿಯಾಗಿ ಸೆಳೆಯುತ್ತಿರುವ ಚೀನಾ ಮೂಲದ ಖ್ಯಾತ ಡಬ್ ಸ್ಮಾಶ್ ಆ್ಯಪ್ ಟಿಕ್ ಟಾಕ್ ಆ್ಯಪ್ ನ್ನು ಬ್ಯಾನ್ ಮಾಡಿ ಮದ್ರಾಸ್ ಹೈಕೋರ್ಟ್ ಹೊರಡಿಸಿರುವ ಆದೇಶದ ಬೆನ್ನಲ್ಲೇ ಈ ಟಿಕ್ ಟಾಕ್ ಆ್ಯಪ್ ಭಾರತದಲ್ಲಿ ಗೂಗಲ್ ಬ್ಲಾಕ್ ಮಾಡಿದೆ.
ಆ್ಯಪ್ ಮೇಲಿನ ನಿಷೇಧವನ್ನು ತೆರವುಗೊಳಿಸಬೇಕು ಎಂದು ಚೀನಾದ ಬೈಟ್ಡಾನ್ಸ್ ಟೆಕ್ನಾಲಜಿ ಮಾಡಿರುವ ಮನವಿಯನ್ನು ಮಂಗಳವಾರ ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಗೂಗಲ್ ಕ್ರಮ ಕೈಗೊಂಡಿದೆ.
ಟಿಕ್ಟಾಕ್ ಆ್ಯಪ್ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಚೀನಾದ ಈ ಆ್ಯಪ್ ಅಶ್ಲೀಲತೆಯನ್ನು ಪ್ರಚೋದಿಸುವುದರಿಂದ ಟಿಕ್ಟಾಕ್ ಆ್ಯಪ್ ಅನ್ನು ಬ್ಯಾನ್ ಮಾಡುವುದು ಸೂಕ್ತ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಪ್ರಸಿದ್ಧಿ ಪಡೆಯುವ ಟಿಕ್ಟಾಕ್ ಆ್ಯಪ್ ಅನ್ನು ಟೈಂಪಾಸ್ಗೆ ಬಳಸುವವರ ಸಂಖ್ಯೆ ಹೆಚ್ಚಿದೆ. ಈ ಆ್ಯಪ್ ನ್ನು ಭಾರತದ 130 ಕೋಟಿ ಜನರು ಬಳಸುತ್ತಿದ್ದಾರೆ. ಟಿಕ್ಟಾಕ್ ಆ್ಯಪ್ನಲ್ಲಿ ವಿಭಿನ್ನ ಎಫೆಕ್ಟ್ಗಳೊಂದಿಗೆ ವಿಡಿಯೋ ಚಿತ್ರೀಕರಿಸಬಹುದಾಗಿದೆ. ಮಾತ್ರವಲ್ಲದೆ ಶಾರ್ಟ್ ವಿಡಿಯೋಗಳನ್ನು ಶೇರ್ ಮಾಡಬಹುದಾಗಿದೆ.
ಅಶ್ಲೀಲ, ಸ್ಥಳೀಯ ಸಂಸ್ಕೃತಿಗೆ ಧಕ್ಕೆಯಾಗುವ , ಮಕ್ಕಳಲ್ಲಿ ಆತ್ಮಹತ್ಯೆ ಭಾವನೆ ಬೆಳೆಸುವ, ಮಕ್ಕಳ ಮೇಲಿನ ದೌರ್ಜನ್ಯದಂಥ ಸಂಗತಿಗಳು, ಈ ಆ್ಯಪ್ ನಲ್ಲಿ ಇರುವುದರಿಂದ ಇದಕ್ಕೆ ನಿಷೇಧ ಹೇರಬೇಕು ಎಂದು ಮಧುರೈ ಮೂಲದ ಹಿರಿಯ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಮುತ್ತು ಕುಮಾರ್ ಎಂಬುವವರು ಟಿಕ್ ಟಾಕ್ ಆ್ಯಪ್ ವಿರುದ್ಧ ದೂರು ಸಲ್ಲಿಸಿದ್ದರು.
ಮದ್ರಾಸ್ ಹೈಕೋರ್ಟ್ ಆದೇಶದ ಬಳಿಕ ಗೂಗಲ್ನ ಮತ್ತು ಆ್ಯಪಲ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದು ಟಿಕ್ ಟಾಕ್ ನಿಷೇಧಿಸುವಂತೆ ಸೂಚಿಸಿತ್ತು ಎಂದು ಮಾಹಿತಿ ತಂತ್ರಜ್ಞಾನ ಇಲಾಖೆಯ ಮೂಲಗಳು ತಿಳಿಸಿವೆ. ಆ್ಯಪ್ನ ಬಗ್ಗೆ ಪ್ರತಿಕ್ರಿಯೆ ನೀಡಲು ಗೂಗಲ್ ನಿರಾಕರಿಸಿದೆ. ಆದರೆ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರುವುದಾಗಿ ತಿಳಿಸಿದೆ.
ಚೀನಾದ ಬೀಜಿಂಗ್ ಬೈಟ್ಡಾನ್ಸ್ ಕಂಪನಿ ಒಡೆತನದ ಟಿಕ್ ಟಾಕ್ ಜಗತ್ತಿನಾದ್ಯಂತ ಐವತ್ತು ಕೋಟಿಗೂ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ಅಲ್ಲದೆ, ಜಗತ್ತಿನಲ್ಲಿ ಹೆಚ್ಚು ಡೌನ್ಲೋಡ್ಗೊಂಡ ಆ್ಯಪ್ಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದೆ