ತಿರುವನಂತಪುರಂ, ನ 23 (DaijiworldNews/AA): ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ 18.70 ಲಕ್ಷ ರೂ. ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕೇರಳದ ವ್ಯಕ್ತಿಯೋರ್ವರಿಂದ ಶ್ರೀಶಾಂತ್ ಸೇರಿದಂತೆ ಮತ್ತಿಬ್ಬರು ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.
ಶ್ರೀಶಾಂತ್, ರಾಜೀವ್ ಕುಮಾರ್ ಮತ್ತು ವೆಂಕಟೇಶ್ ಕಿಣಿ ಎಂಬುವವರ ವಿರುದ್ಧ ಕೇರಳ ಚೂಂಡಾ ಮೂಲದ ಸರೀಶ್ ಗೋಪಾಲನ್ ದೂರು ದಾಖಲಿಸಿದ್ದಾರೆ. ಇವರು ನೀಡಿದ ದೂರಿನಲ್ಲಿ ಆರೋಪಿಗಳು ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ಕ್ರೀಡಾ ಅಕಾಡೆಮಿ ನಿರ್ಮಾಣ ಮಾಡುವುದಾಗಿ ಹೇಳಿಕೊಂಡು 2019 ರಿಂದ ವಿವಿಧ ದಿನಾಂಕಗಳಲ್ಲಿ ಹಣ ಪಡೆದಿದ್ದಾರೆ. ಇದುವರೆಗೆ ಸುಮಾರು 18.70 ಲಕ್ಷ ರೂ. ಹಣ ಪಡೆದಿದ್ದಾರೆ. ಅಕಾಡೆಮಿಯಲ್ಲಿ ಪಾಲುದಾರರಾಗಲು ಅವಕಾಶ ನೀಡಿದ ನಂತರ ಹಣವನ್ನು ಹೂಡಿಕೆ ಮಾಡಿರುವುದಾಗಿ ಉಲ್ಲೇಖಿಸಲಾಗಿದೆ.
ಇನ್ನು ಶ್ರೀಶಾಂತ್, ರಾಜೀವ್ ಕುಮಾರ್ ಮತ್ತು ವೆಂಕಟೇಶ್ ಕಿಣಿ ಅವರ ವಿರುದ್ಧ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ವಂಚನೆ ಪ್ರಕರಣದಲ್ಲಿ ಶ್ರೀಶಾಂತ್ ಅವರನ್ನು ಮೂರನೇ ಆರೋಪಿ ಎಂದು ಉಲ್ಲೇಖ ಮಾಡಲಾಗಿದೆ.