ನವದೆಹಲಿ, ನ 23 (DaijiworldNews/AA): 100 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರಾಜ್ಗೆ ಸಮನ್ಸ್ ಜಾರಿಯಾಗಿದೆ. ನಟ ಪ್ರಕಾಶ್ ರಾಜ್ ಪ್ರಕರಣದ ತನಿಖೆ ನಡೆಸಿರುವ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆಗೆ ಒಳಪಡಬೇಕಾಗಿದೆ.
ತ್ರಿರುಚಿ ಮೂಲದ ಪ್ರಣವ್ ಜ್ಯುವೆಲರ್ಸ್ ಎಂಬ ಆಭರಣ ಮಾರಾಟ ಸಂಸ್ಥೆಯೊಂದಕ್ಕೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾಗುತ್ತಿರುವ 100 ಕೋಟಿ ವಂಚನೆ ಪ್ರಕರಣದ ತನಿಖೆಯನ್ನು ಇಡಿಯು ನಡೆಸುತ್ತಿದೆ. ನಟ ಪ್ರಕಾಶ್ ರೈ ಅವರು ಪ್ರಣವ್ ಜ್ಯುವೆಲರ್ಸ್ ನ ರಾಯಭಾರಿ ಆಗಿದ್ದರು, ಈ ಕಾರಣದಿಂದಲೇ ನಟ ಪ್ರಕಾಶ್ ರೈಗೆ ಸಮನ್ಸ್ ನೀಡಿರುವ ಇಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.
ಬಹಳ ಸಮಯದಿಂದಲೂ ಪ್ರಕಾಶ್ ರೈ ಪ್ರಣವ್ ಜ್ಯುವೆಲರ್ಸ್ ಗೆ ರಾಯಭಾರಿಯಾಗಿದ್ದರು. ಆದರೆ ಇತ್ತೀಚೆಗೆ ಈ ಸಂಸ್ಥೆ ನಷ್ಟ ಘೋಷಿಸಿದ್ದು, ತನ್ನ ಅಂಗಡಿಗಳನ್ನೆಲ್ಲ ಬಂದ್ ಮಾಡಿತ್ತು. ಅಂಗಡಿಗಳನ್ನೆಲ್ಲ ಬಂದ್ ಮಾಡಿದ ಬೆನ್ನಲ್ಲೇ ಗ್ರಾಹಕರೆಲ್ಲ ಪ್ರಣವ್ ಜ್ಯುವೆಲರ್ಸ್ ವಿರುದ್ಧ ದೂರು ದಾಖಲಿದ್ದಾರೆ. ಅಂಗಡಿಯ ಚಿನ್ನದ ಹೂಡಿಕೆ ಸ್ಕೀಂನಲ್ಲಿ ಗ್ರಾಹಕರಿಂದ ಲಕ್ಷಾಂತರ ರೂ. ಹಣ ಪಡೆದುಕೊಂಡಿರುವ ವಿಚಾರ ಬಹಿರಂಗವಾಗಿದ್ದು, 100 ಕೋಟಿ ರೂ. ಗೂ ಅಧಿಕ ಹಣವನ್ನು ಗ್ರಾಹಕರಿಂದ ಪಡೆಯಲಾಗಿತ್ತು ಎನ್ನಲಾಗಿದೆ.