ಹೊಸದಿಲ್ಲಿ, ಎ17(Daijiworld News/SS): ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಮ್ಮತಿ ಸೂಚಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ, ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಣಕ್ಕೆ ಇಳಿಯುವ ಕುರಿತು ಪ್ರಿಯಾಂಕಾ ತಮ್ಮ ಒಪ್ಪಿಗೆ ಸೂಚಿಸಿದ್ದಾರೆ. ಈ ಕುರಿತು ಪಕ್ಷ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಜನ ಬದಲಾವಣೆ ಬಯಸಿದ್ದಾರೆ. ಹೀಗಾಗಿ ಪ್ರಿಯಾಂಕಾ ವಾದ್ರಾ ಸ್ಪರ್ಧಿಸಿದರೆ ಗೆಲುವು ಸಾಧಿಸುವುದು ನಿಶ್ಚಿತ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ತಾವು ಈ ಸಲ ಸ್ಪರ್ಧೆ ಮಾಡುವುದೇ ಆದರೆ ಅದು ವಾರಾಣಸಿಯಿಂದ ಎಂದು ಪ್ರಿಯಾಂಕಾ ಸಹ ತಿಳಿಸಿದ್ದರು.
ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧೆ ಕುರಿತು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಪ್ರಿಯಾಂಕಾ ಉಸ್ತುವಾರಿಯಾಗಿರುವ ಉತ್ತರ ಪ್ರದೇಶದ ಪೂರ್ವ ವಲಯದಲ್ಲಿಯೇ ವಾರಾಣಸಿ ಕ್ಷೇತ್ರವಿದೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿರುವ ಸೋನಿಯಾ ಗಾಂಧಿ ಪುತ್ರಿ ಹಾಗೂ ರಾಹುಲ್ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶಕ್ಕೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಆರಂಭದಲ್ಲಿ ಅವರು ಯಾವುದಾದರೂ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಚರ್ಚೆಗಳಿರಲಿಲ್ಲ. ಕಳೆದ ತಿಂಗಳು ಪಕ್ಷದ ಕಾರ್ಯಕರ್ತರು ಉತ್ತರ ಪ್ರದೇಶದ ಅಮೇಠಿ ಅಥವಾ ರಾಯ್ಬರೇಲಿಯಿಂದ ಚುನಾವಣೆಗೆ ಸ್ಪರ್ಧಿಸಿ ಎಂದು ಕೇಳಿಕೊಂಡಿದ್ದರು. ಆಗ ವಾರಾಣಸಿಯಿಂದ ಏಕೆ ಬೇಡ ಎಂದು ಪ್ರಿಯಾಂಕಾ ಮರುಪ್ರಶ್ನೆ ಹಾಕಿದ್ದರು. ನಂತರ ಪಕ್ಷ ಬಯಸಿದರೆ ತಾವು ಚುನಾವಣೆಗೆ ಸ್ಪರ್ಧಿಸುವುದಾಗಿಯೂ ಹೇಳಿದ್ದರು.